ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಹುಟ್ಟಿದ ದಿನ ಇಂದು. ಈ ಹಿನ್ನೆಲೆಯಲ್ಲಿ ಇಂದು ಮುಂಜಾನೆಯಿಂದಲೇ ಅಪ್ಪು ಸ್ಮಾರಕದ ಬಳಿ ಅಭಿಮಾನಿಗಳು ಸಾವಿರಾರು ಸಂಖ್ಯೆಯಲ್ಲಿ ನೆರೆದಿದ್ದು ಅಗಲಿದ ದಿವ್ಯ ಚೇತನಕ್ಕೆ ನಮನ ಸಲ್ಲಿಸಿದ್ದಾರೆ. ಅಪ್ಪು ಬರ್ತಡೇ ಹಿನ್ನೆಲೆಯಲ್ಲಿ ಮಧ್ಯರಾತ್ರಿಯಿಂದಲೇ ಹಲವು ರೀತಿಯ ಕಾರ್ಯಕ್ರಮಗಳು ಕಂಠೀರವ ಸ್ಟುಡಿಯೋನಲ್ಲಿನ ಅಪ್ಪು ಸ್ಮಾರಕ ಬಳಿ ಪ್ರಾರಂಭವಾಗಿವೆ. ರಾತ್ರಿಯೇ ಕೇಕ್ ಕತ್ತರಿಸಿ ಅಭಿಮಾನಿಗಳು ಸಂಭ್ರಮಿಸಿದ್ದಾರೆ. ಅಂದಹಾಗೆ ಅಪ್ಪುವಿನ ಈ ಹುಟ್ಟುಹಬ್ಬವನ್ನು ‘ಸ್ಪೂರ್ತಿಯ ಹಬ್ಬ’ವನ್ನಾಗಿ ಆಚರಿಸಲಾಗುತ್ತಿದೆ.
ಹುಟ್ಟುಹಬ್ಬದ ಅಂಗವಾಗಿ ಅಪ್ಪುವಿನ ಸಮಾಧಿಯನ್ನು ಕೆಂಪು ಗುಲಾಬಿ ಹೂವುಗಳಿಂದ ಅಲಂಕರಿಸಲಾಗಿದೆ. ಅಭಿಮಾನಿಗಳ ಸುಗಮ ದರ್ಶನಕ್ಕೆ ಸಕಲ ರೀತಿಯ ವ್ಯವಸ್ಥೆ ಮಾಡಿಸಲಾಗಿದೆ. ಒಂದು ಲಕ್ಷಕ್ಕೂ ಹೆಚ್ಚು ಮಂದಿ ಅಭಿಮಾನಿಗಳು ಇಂದು ಒಂದೇ ದಿನ ಆಗಮಿಸುವ ನಿರೀಕ್ಷೆ ಇದ್ದು, ಎಲ್ಲರಿಗೂ ಅನ್ನದಾನ ವ್ಯವಸ್ಥೆಯನ್ನು ದೊಡ್ಮನೆ ಕುಟುಂಬ ಮಾಡಿದೆ.
ಬಂದವರಿಗೆಲ್ಲ ಚಿಕನ್ ಬಿರಿಯಾನಿ ನೀಡುವ ವ್ಯವಸ್ಥೆಯನ್ನು ಮಾಡಲಾಗುತ್ತಿದೆ. ಇದರ ಜವಾಬ್ದಾರಿಯನ್ನು ಯುವ ರಾಜ್ಕುಮಾರ್ ಹೊತ್ತುಕೊಂಡಿದ್ದಾರೆ ಎನ್ನಲಾಗುತ್ತಿದೆ.
ಇಂದು ಬೆಳ್ಳಂಬೆಳಿಗ್ಗೆ ದೊಡ್ಮನೆ ಕುಟುಂಬದ ಸದಸ್ಯರೆಲ್ಲ ಸ್ಮಾರಕಕ್ಕೆ ಆಗಮಿಸಿ ವಿಶೇಷ ಪೂಜೆ ಮಾಡಲಿದ್ದಾರೆ. ಅಶ್ವಿನಿ ಪುನೀತ್ ರಾಜ್ಕುಮಾರ್, ಅಪ್ಪು ಪುತ್ರಿ ಆಗಮಿಸಿ ಸ್ಮಾರಕಕ್ಕೆ ಪೂಜೆ ಮಾಡಲಿದ್ದಾರೆ. ಶಿವಣ್ಣ-ಗೀತಕ್ಕ, ರಾಘವೇಂದ್ರ ರಾಜ್ಕುಮಾರ್ ಹಾಗೂ ಕುಟುಂಬದವರು ಆಗಮಿಸಿ ಸ್ಮಾರಕಕ್ಕೆ ಪೂಜೆ ಸಲ್ಲಿಸಲಿದ್ದಾರೆ.