ಮಾಲ್ದೀವ್ಸ್ ನಲ್ಲಿ ಅಡ್ವಾನ್ಸ್ಡ್ ಲೈಟ್ ಹೆಲಿಕಾಪ್ಟರನ್ನು ಕಾರ್ಯಾಚರಿಸುತ್ತಿದ್ದ ಭಾರತೀಯ ಸೇನಾ ಸಿಬ್ಬಂದಿಗಳ ಮೊದಲ ತಂಡವು ಭಾರತಕ್ಕೆ ಮರಳಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯವು ತಿಳಿಸಿದೆ.
ಮಿಲಿಟರಿ ತಂಡದ ಬದಲು ಮಾಲ್ಡೀವ್ಸ್ ನಲ್ಲಿ ನಾಗರಿಕ ತಾಂತ್ರಿಕ ತಜ್ಞರನ್ನು ನಿಯೋಜಿಸಲಾಗಿದೆ. ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ವಕ್ತಾರ ರಣಧೀರ್ ಜೈಸ್ವಾಲ್ ಮಾಹಿತಿ ನೀಡಿದ್ದಾರೆ.
ಮಾಲ್ದೀವ್ಸ್ ಅಧ್ಯಕ್ಷ ಮುಹಮ್ಮದ್ ಮುಯಿಝ್ಝು ಅವರು ತನ್ನ ದೇಶದಿಂದ ಭಾರತೀಯ ಸೇನಾ ಸಿಬ್ಬಂದಿಗಳ ಮೊದಲ ತಂಡವನ್ನು ವಾಪಸ್ ಕರೆಸಿಕೊಳ್ಳಲು ಮಾ.10ರ ಗಡುವನ್ನು ವಿಧಿಸಿದ್ದರು. ನವಂಬರ್ ನಲ್ಲಿ ಮುಯಿಝ್ಝು ಅಧಿಕಾರಕ್ಕೆ ಬಂದ ಬಳಿಕ ಭಾರತ ಮತ್ತು ಮಾಲ್ದೀವ್ಸ್ ನಡುವಿನ ಸಂಬಂಧಗಳು ಸ್ವಲ್ಪ ಹಳಿತಪ್ಪಿವೆ.
ಚೀನಾ ಪರ ನಾಯಕರಾಗಿ ವ್ಯಾಪಕವಾಗಿ ಪರಿಗಣಿಸಲಾಗಿರುವ ಮುಯಿಝ್ಝು ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಬಳಿಕ ತನ್ನ ದೇಶದಿಂದ ಭಾರತೀಯ ಸೇನಾ ಸಿಬ್ಬಂದಿಗಳನ್ನು ತೆರವುಗೊಳಿಸುವ ತನ್ನ ಚುನಾವಣಾ ಭರವಸೆಯನ್ನು ಉಳಿಸಿಕೊಳ್ಳುವುದಾಗಿ ತಿಳಿಸಿದರು.