ಇಂದು ನವರಸ ನಾಯಕ ಜಗ್ಗೇಶ್ ಅವರ ಹುಟ್ಟುಹಬ್ಬ. 61ನೇ ವರ್ಷದ ಕಾಲಿಟ್ಟಿರುವ ಜಗ್ಗೇಶ್ ಮಂತ್ರಾಲಯ ದೇವಸ್ಥಾನದಿಂದಲೇ ವಿಶೇಷ ವಿಡಿಯೊ ಮಾಡಿ ಹಲವು ವಿಚಾರ ಹಂಚಿಕೊಂಡಿದ್ದಾರೆ. ಇದೇ ವೇಳೆ ವರ್ತೂರ್ ಸಂತೋಷ್ ಬಗ್ಗೆ ಜಗ್ಗೇಶ್ ಆಡಿದ ಮಾತುಗಳು ಹಾಗೂ ‘ರಂಗನಾಯಕ’ ಸಿನಿಮಾದ ಬಗ್ಗೆಯೂ ಮಾತನಾಡಿದ್ದಾರೆ.
ಜಗ್ಗೇಶ್ ಮಾತನಾಡಿ ʻʻಮನುಷ್ಯನ ಜೀವನ ತುಂಬ ಶ್ರೇಷ್ಠವಾದದ್ದು. 60 ವರ್ಷ ಬಹಳ ದೊಡ್ಡ ಆಯಸ್ಸು. 61ಕ್ಕೆ ಕಾಲಿಟ್ಟಿದ್ದೇನೆ. ತಾಯಿಯ ಮಾರ್ಗದರ್ಶನದಿಂದ ಇಲ್ಲಿಯವರೆಗೆ ಬಂದೆ. ತಾಯಿ ಎನ್ನುವವಳು ಎಲ್ಲರಿಗೂ ಪ್ರಥಮ ಗುರು. ಎಲ್ಲ ಬಂಧುಗಳಿಗೆ ಹೇಳೋದು ಒಂದೇ ತಂದೆ ತಾಯಿಗಿಂತ ದೇವರು ಯಾರೂ ಇಲ್ಲ. ತಂದೆ ತಾಯಿಗ ಬಗ್ಗೆ ಗೌರವ ಹೆಚ್ಚು ಮಾಡ್ಕೋಬೇಕು. 1980ರಲ್ಲಿ ಚಿತ್ರರಂಗಕ್ಕೆ ಕಾಲಿಟ್ಟೆ. ನನ್ನ ರಾಯರ ಕೃಪೆಯಿಂದ ಇಲ್ಲಿಯವರೆಗೆ ಬಂದೆ. ತುಂಬ ಮನಸ್ಸಿನಲ್ಲಿ ಬಹಳ ದಿನದಿಂದ ಹೇಳಬೇಕು ಅಂತಿದ್ದೆ. ನಾನು ನೇರ ನುಡಿ ಮಾತಾಡ್ತೇನೆ. ಮನಸ್ಸಿನಲ್ಲಿ ಏನಿಲ್ಲ. ಹಳ್ಳಿಯವನು ನಾನು. ರಾಜ್ಕುಮಾರ್ ಅವರು ಕೂಡ ಎಷ್ಟೇ ದೊಡ್ಡವಾಗಿದ್ದರೂ ಹಳ್ಳಿ ಶೈಲಿಯಲ್ಲೇ ಮಾತನಾಡುತ್ತಿದ್ದರು. ಯಾವತ್ತಾದರೂ ನಾನು ಮೈಕ್ ಹಿಡಿದು ಮಾತನಾಡುವಾಗ ಯಾರಿಗಾದರೂ ಬೇಸರ ಆಗಿದ್ದರೆ ಕ್ಷಮಿಸಿ. ನಾನು ನಿಮ್ಮ ತಂದೆ ವಯಸ್ಸಿನವನು. ಬೇಕಂತ ಯಾವತ್ತೂ ಮಾತಾಡಲ್ಲ, ಕ್ಷಮಿಸಿ” ಎಂದಿದ್ದಾರೆ.
ಕೆಲವು ದಿನಗಳ ಹಿಂದೆಯಷ್ಟೇ ಜಗ್ಗೇಶ್ ಅವರು ‘ರಂಗನಾಯಕ’ ಸಿನಿಮಾ ಕಾರ್ಯಕ್ರಮದಲ್ಲಿ ʻಯಾವನೋ ಕಿತ್ತೋದ್ ನನ್ಮಗ ರಿಯಲ್ ಆಗಿ ಹುಲಿ ಉಗುರು ಹಾಕ್ಕೊಂಡʼ ಎಂದು ವರ್ತೂರ್ ಸಂತೋಷ್ಗೆ ಹೇಳಿದ್ದರು. ಈ ಮಾತಿಗೆ ಸೋಷಿಯಲ್ ಮೀಡಿಯಾದಲ್ಲಿ ಹಲವರು ಆಕ್ರೋಶ ವ್ಯಕ್ತಪಡಿಸಿದ್ದರು. ಇದೀಗ ವಿಡಿಯೊ ಮೂಲಕ ಕ್ಷಮೆ ಕೇಳಿದ್ದಾರೆ.
ʻʻಸಾಮಾಜಿಕ ಜಾಲತಾಣ ಬಲಿಷ್ಠ ಆಗಿದೆ ಎಂದು ‘ರಂಗನಾಯಕ’ ಸಿನಿಮಾಗಳ ಬಗ್ಗೆ ಟೀಕೆ ಮಾಡುವರಿಗೆ ಪುರಾಣದ ಕಥೆ ಹೇಳಿದ್ದಾರೆ. ಯಾವುದೇ ಕಾರಣಕ್ಕೂ ಯಾರನ್ನೂ ಅಣಕಿಸಬೇಡಿ. ಎಲ್ಲರಿಗೂ ಸಾಧ್ಯವಾದಷ್ಟು ಶುಭಹಾರೈಸಿ. ಮೊನ್ನೆ ಒಂದು ಸಿನಿಮಾ ಮಾಡಿದೆ. ನಿಮಗೆಲ್ಲಾ ಹರ್ಟ್ ಆಗಿದೆ. ನನ್ನ ತಪ್ಪಿಲ್ಲ. ನಾನು ಮಾಡಿದ ಆ ಚಿತ್ರ ನನ್ನದಲ್ಲ. ಒಬ್ಬ ನಿರ್ದೇಶಕನನ್ನು ನಂಬಿ ನಾನು ಕೆಲಸ ಕೊಟ್ಟಾಗ ಆತ ತನಗಿದ್ದ ಆಸೆ ಪ್ರಕಾರ ತನ್ನ ಕರ್ತವ್ಯ ನಿರ್ವಹಿಸಿಬಿಟ್ಟಿದ್ದಾನೆ. ನನಗೂ ಅದಕ್ಕೂ ಯಾವುದೇ ರೀತಿಯ ಸಂಬಂಧವಿಲ್ಲ. ಅಕಸ್ಮಾತ್ ನಿಮಗೆ ಬೇಸರವಾಗಿದ್ದರೆ ಕ್ಷಮೆ ಇರಲಿ. ನಾನು ಹಲವಾರು ಒಳ್ಳೆಯ ಸಿನಿಮಾಗಳನ್ನು ಕೊಟ್ಟಿದ್ದೀನಿ. ಲೋಪ ದೋಷಗಳು ಇದ್ದರೆ ಕ್ಷಮೆ ಇರಲಿʼʼಎಂದಿದ್ದಾರೆ.