ಪೀಣ್ಯ ದಾಸರಹಳ್ಳಿ:’ ಯಾರದೋ ಮಾತನ್ನು ಕೇಳಿ ಕಾರಣವಿಲ್ಲದೆ ಬಿಬಿಎಂಪಿ ಅಧಿಕಾರಿಗಳನ್ನು ವರ್ಗಾವಣೆ ಮಾಡುತ್ತಿರುವ ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ಅವರು ಬೇಜವಾಬ್ದಾರಿತನದಿಂದ ಅಧಿಕಾರ ನಡೆಸುತ್ತಿದ್ದಾರೆ’ ಎಂದು ಶಾಸಕ ಎಸ್. ಮುನಿರಾಜು ದೂರಿದರು.
ಈ ಸಂಬಂಧ ಮಾತನಾಡಿದ ಅವರು, ಕಮಿಷನರ್ ಗೆ ಯೋಗ್ಯತೆ ಇದ್ದರೆ ನಮ್ಮಲ್ಲಿ ಖಾಲಿ ಇರುವ ಅಧಿಕಾರಿಗಳ ಸ್ಥಾನಗಳನ್ನು ಪೂರ್ಣ ಮಾಡಲಿ, ಈ ಬಗ್ಗೆ ಉಸ್ತುವಾರಿ ಸಚಿವ ಡಿ.ಕೆ. ಶಿವಕುಮಾರ್ ಮತ್ತು ಸಿಎಂ ಅವರಿಗೆ ಪತ್ರ ಬರೆದಿದ್ದೇನೆ’
ಇತ್ತೀಚಿಗೆ ನನ್ನ ಕ್ಷೇತ್ರದ ಪಾಲಿಕೆ ಅಧಿಕಾರಿಗಳನ್ನು ಎಂಜಿನಿಯರ್ ಧರ್ಮೇಂದ್ರ ಕುಮಾರ್ ಅವರು ಬಂದು ಮೂರು ತಿಂಗಳಾಗಿಲ್ಲ ಬದಲಿಸಿದ್ದಾರೆ. ಪ್ರಾಜೆಕ್ಟ್ ನ ಒಬ್ಬ ಮಹಿಳಾ ಎಂಜಿನಿಯರ್ ಅವರು ಎರಡು ತಿಂಗಳಾಗಿಲ್ಲ ಬದಲಿಸಿದ್ದಾರೆ. ಇನ್ನೊಬ್ಬ ಅಧಿಕಾರಿ ಎಇಇ ಕೃಷ್ಣಮೂರ್ತಿ ಅವರನ್ನು ಬದಲಿಸಿದ್ದಾರೆ. ನಮಗೆ ನಾಲ್ಕು ಜನ ಎಇಇ ಬೇಕು. ಆದರೆ ಈಗ ಇರುವುದು ಒಬ್ಬರೇ, ಸರಿಯಾದ ಇಇ ಗಳಿಲ್ಲ,ಎಇ ಗಳಿಲ್ಲ, ಆಫೀಸ್ ಸ್ಟಾಫ್ ಗಳು ಇಲ್ಲ, ಕೇಳಿದರೆ ಚುನಾವಣೆ ಅಲ್ಲಿಗೆ ಹೋಗಿದ್ದಾರೆ, ಇಲ್ಲಿಗೆ ಹೋಗಿದ್ದಾರೆ ಎಂದು ಉತ್ತರಿಸುತ್ತಾರೆ’.
ಸಮಸ್ಯೆ ಹೇಳಿಕೊಳ್ಳೋಣ ಎಂದು ಪಾಲಿಕೆ ಆಯುಕ್ತ ತುಷಾರ್ ಗಿರಿನಾಥ್ ಅವರಿಗೆ ಬೆಳಗ್ಗೆಯಿಂದ 12 ಬಾರಿ ಫೋನ್ ಮಾಡಿದ್ದೇನೆ, ಫೋನ್ ರಿಸೀವ್ ಮಾಡ್ತಾ ಇಲ್ಲ ಒಬ್ಬ ಶಾಸಕನ ಕರೆ ಸ್ವೀಕರಿಸದಂತೆ ಬೇಜವಾಬ್ದಾರಿತನದಿಂದ ಸರ್ಕಾರದ ಕೈಗೊಂಬೆಯಾಗಿ ಕೆಲಸ ಮಾಡುತ್ತಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಒಬ್ಬ ಪಾಲಿಕೆ ಆಯುಕ್ತರಾದವರು ಯಾವ ರೀತಿ ವರ್ಗಾವಣೆ ಮಾಡಬೇಕು ಎಂಬುದು ತಿಳಿದಿರಬೇಕು. ಅದನ್ನು ಬಿಟ್ಟು ಜನರಿಂದ ತಿರಸ್ಕಾರವಾಗಿರುವ ಯಾರದೋ ಮಾತನ್ನು ಕೇಳಿ ಬೇಜವಾಬ್ದಾರಿತನದಿಂದ ಅಧಿಕಾರಿಗಳನ್ನು ವರ್ಗಾವಣೆ ಮಾಡುತ್ತಿದ್ದಾರೆ. ಅವರಿಗೆ ಯೋಗ್ಯತೆ ಇದ್ದರೆ ಬೇರೆ ಅಧಿಕಾರಿಗಳನ್ನು ಹಾಕಲಿ ನಮಗೆ ಅವರಿಂದ ಕೆಲಸ ಮಾಡಿಸಿಕೊಳ್ಳುವ ಶಕ್ತಿ ಇದೆ’ ಎಂದು ಕಿಡಿಕಾರಿದರು.
ಇಲ್ಲಿನ ಜಂಟಿ ಆಯುಕ್ತ ಬಾಲಶೇಖರ್ ನಿಸ್ಸಾಯಕರಾಗಿದ್ದಾರೆ. ಊರು ತುಂಬಾ ಫ್ಲೆಕ್ಸ್ ಹಾವಳಿ ಅದನ್ನು ತೆಗೆಸಿಲ್ಲ, ವಲಯ ಆಯುಕ್ತೆ ಪ್ರೀತಿ ಗೆಲ್ಲೋಟ್ ಅವರಿಗೆ ದೂರು ನೀಡಿದರು ಪ್ರಯೋಜನವಿಲ್ಲ’ ಎಂದರು.
ನೀರಿನ ಹಾಹಾಕಾರ ಹಾಗೆಯೇ ಮುಂದುವರೆದಿದೆ. ಸರ್ಕಾರ ತಮಿಳುನಾಡಿಗೆ ನೀರು ಬಿಡುತ್ತಿದೆ. ಇಲ್ಲಿ 10 ರಿಂದ 12 ದಿನಕ್ಕೊಮ್ಮೆ ಸರಿಯಾಗಿ ನೀರು ಸಿಗುತ್ತಿಲ್ಲ. ಸಿಂಟೆಕ್ಸ್ ಮೂಲಕ ನೀಡುವ ನೀರು ಎರಡು ಮತ್ತು ಮೂರನೇ ಮಹಡಿಗೆ ತೆಗೆದುಕೊಂಡು ಹೋಗಲು ಜನರಿಗೆ ಆಗುತ್ತಿಲ್ಲ’ ಮುಖ್ಯಮಂತ್ರಿಗಳು ನುಡಿದಂತೆ ನಡೆದಿದ್ದೇವೆ ಎನ್ನುತ್ತಿದ್ದಾರೆ. ಜನರು ಚುನಾವಣೆಯಲ್ಲಿ ತಕ್ಕ ಪಾಠ ಕಲಿಸುತ್ತಾರೆ’ ಎಂದರು.