ಬೆಂಗಳೂರು: ಹನಿ ಹನಿ ನೀರೂ ಎಷ್ಟು ಮುಖ್ಯ ಎಂದು ಮನಸಿಗೆ ನಾಟಿಸುವ ಕ್ಲಿಷ್ಟಕರ ಸಂದರ್ಭದಲ್ಲಿ ಸಿಲಿಕಾನ್ ಸಿಟಿ ಇದೆ. ನೀರನ್ನು ಮಿತವಾಗಿ ಬಳಸುವುದು ಹೇಗೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಸಲಹೆಗಳು ಹರಿದಾಡುತ್ತಿವೆ. ಈ ಮಧ್ಯೆ ಉದ್ಯಮಿ ಆನಂದ್ ಮಹೀಂದ್ರ ಅವರು ಎಸಿ ತ್ಯಾಜ್ಯ ನೀರನ್ನು ಹೇಗೆ ಬಳಸಿಕೊಳ್ಳಬಹುದು ಎನ್ನುವ ಒಂದು ವಿಡಿಯೋವನ್ನು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಏನಿದೆ ಈ ಕ್ಲಿಪ್ನಲ್ಲಿ?
ಎಸಿಯಿಂದ ಹೊರಬರುವ ನೀರನ್ನು ಸಂಗ್ರಹಿಸಿ ಮನೆ ಒರೆಸಲು, ಗಿಡಗಳಿಗೆ ಹಾಕಲು, ಟಾಯ್ಲೆಟ್ ಫ್ಲಶ್ ಮಾಡಲು, ಕಾರ್ ತೊಳೆಯಲು ಬಳಸಬಹುದು. ಆ ಎಸಿ ನೀರನ್ನು ಹೇಗೆ ಸಂಗ್ರಹಿಸಿಟ್ಟುಕೊಳ್ಳಬಹುದು ಎಂದು ಈ ವಿಡಿಯೋ ತಿಳಿಸುತ್ತದೆ. ಎಸಿ ಕಂಡೆನ್ಸರ್ನಿಂದ ಒಂದು ಸಣ್ಣ ಪೈಪ್ ಅನ್ನು ಗೋಡೆಗೆ ತಾಕಿದಂತಿರುವ ದೊಡ್ಡ ಪೈಪ್ಗೆ (ಮಳೆ ನೀರು ಹೋಗಲು ಬಿಡುವ ಗಾತ್ರದ ಪೈಪ್) ಕನೆಕ್ಟ್ ಮಾಡಬಹುದು.
ಈ ದೊಡ್ಡ ಪೈಪ್ನ ಕೊನೆಯಲ್ಲಿ ಒಂದು ನಲ್ಲಿಯನ್ನು ಫಿಟ್ ಮಾಡಬಹುದು. ಈ ರೀತಿಯಲ್ಲಿ ಎಸಿಯಿಂದ ಹೊರಬರುವ ನೀರನ್ನು ಕೆಳಗೆ ಟ್ಯಾಪ್ ಮೂಲಕ ಯಾವುದಾದರೂ ಪಾತ್ರೆಗಳಿಗೆ ಹಿಡಿದಿಟ್ಟುಕೊಳ್ಳಬಹುದು. ಅಥವಾ ಎಸಿ ಕಂಡೆನ್ಸರ್ನಿಂದ ಸಣ್ಣ ಪೈಪ್ ಮೂಲಕ ನೇರವಾಗಿ ಯಾವುದಾದರೂ ದೊಡ್ಡ ಡ್ರಮ್ಗೆ ಬಂದು ಬೀಳುವಂತೆಯೂ ಮಾಡಬಹುದು.
ಆನಂದ್ ಮಹೀಂದ್ರ ಈ ವಿಡಿಯೋವನ್ನು ಹಂಚಿಕೊಂಡಿದ್ದು, ಇದನ್ನು ದೇಶಾದ್ಯಂತ ಪ್ರಯೋಗಿಸಬಹುದು ಎಂದಿದ್ದಾರೆ. ನೀರು ಆಸ್ತಿ, ಅದನ್ನು ಸುರಕ್ಷಿತವಾಗಿ ಸಂಗ್ರಹಿಸುವುದು ಅವಶ್ಯಕ. ಈ ಮಾತನ್ನು ಎಲ್ಲರೂ ಹಂಚಿಕೊಳ್ಳಿ ಎಂದು ಸಂದೇಶ ನೀಡಿದ್ದಾರೆ.