ನವದೆಹಲಿ: ಮಹಿಳಾ ಪ್ರೀಮಿಯರ್ ಲೀಗ್ನಲ್ಲಿ ಆರ್ಸಿಬಿ ವನಿತೆಯರ (RCB Womens) ಗೆಲುವು ಎಲ್ಲೆಡೆ ಹರ್ಷೋದ್ಘಾರ ತರಿಸಿದೆ. ದೇಶಾದ್ಯಂತ ಇರುವ ಆರ್ಸಿಬಿ ಅಭಿಮಾನಿಗಳು ತಮ್ಮ ಸೋಶಿಯಲ್ ಮೀಡಿಯಾಗಳಲ್ಲಿ ಸಂತಸದ ಸಂದೇಶಗಳನ್ನ ಹಂಚಿಕೊಳ್ಳುತ್ತಿದ್ದಾರೆ. ಅದರಲ್ಲೂ ನಾಯಕಿ ಸ್ಮೃತಿ ಮಂಧಾನ, ಎಲ್ಲಿಸ್ ಪೆರ್ರಿ (Ellyse Perry), ಕನ್ನಡತಿ ಶ್ರೇಯಾಂಕ ಪಾಟೀಲ್ ಅವರನ್ನ ಹಾಡಿ ಹೊಗಳುತ್ತಿದ್ದಾರೆ.
ಈ ವೇಳೆ ಗೆಲುವಿನ ಖುಷಿ ತಡೆಯಲಾರೆ ಕ್ರಿಕೆಟ್ ಲೋಕದ ಕಿಂಗ್ ವಿರಾಟ್ ಕೊಹ್ಲಿ (Virat Kohli) ತಕ್ಷಣವೇ ವೀಡಿಯೋ ಕಾಲ್ ಮಾಡಿ ವನಿತೆಯರ ತಂಡದೊಂದಿಗೆ ಸಂತಸ ಹಂಚಿಕೊಂಡಿದ್ದಾರೆ. ನಾಯಕಿ ಸ್ಮೃತಿ ಮಂಧಾನ ಹಾಗೂ ಇತರ ಮಹಿಳಾ ಮಣಿಗಳಿಗೆ ಅಭಿನಂದನೆ ಸಲ್ಲಿದ್ದಾರೆ. ಅಷ್ಟೇ ಅಲ್ಲ ತಮ್ಮ ಇನ್ಸ್ಟಾಗ್ರಾಮ್ನಲ್ಲೂ ʻಸೂಪರ್ವುಮನ್ʼ ಎಂಬ ಬರಹದೊಂದಿಗೆ ಆರ್ಸಿಬಿ ಚಾಂಪಿಯನ್ಸ್ ಫೋಟೋವನ್ನ ಹಂಚಿಕೊಂಡಿದ್ದಾರೆ
ಕೊನೆಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಹಿಳಾ ತಂಡ 16 ಪ್ರಶಸ್ತಿಯ ಬರ ನೀಗಿಸಿದೆ. ಮಹಿಳಾ ಪ್ರೀಮಿಯರ್ ಲೀಗ್ನ ಮೊದಲ ಆವೃತ್ತಿಯಲ್ಲಿ ಹೀನಾಯವಾಗಿ ಸೋತಿದ್ದ ಆರ್ಸಿಬಿ 2ನೇ ಆವೃತ್ತಿಯಲ್ಲಿ ಚಾಂಪಿಯನ್ ಕಿರೀಟ ಮುಡಿಗೇರಿಸಿಕೊಂಡಿದ್ದು, ಹೆಣ್ಮಕ್ಕಳೇ ಸ್ಟ್ರಾಂಗು ಗುರು ಎಂಬ ಮಾತನ್ನು ಮತ್ತೊಮ್ಮೆ ಸಾಬೀತು ಮಾಡಿದ್ದಾರೆ.
ಇಲ್ಲಿನ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಮಹಿಳಾ ಪ್ರೀಮಿಯರ್ ಲೀಗ್ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡ 18.3 ಓವರ್ಗಲ್ಲಿ 113 ರನ್ ಗಳಿಗೆ ಆಲೌಟ್ ಆಯಿತು. 114 ರನ್ಗಳ ಗುರಿ ಬೆನ್ನತ್ತಿದ ಆರ್ಸಿಬಿ 19.3 ಓವರ್ಗಳಲ್ಲೇ 2 ವಿಕೆಟ್ ನಷ್ಟಕ್ಕೆ 115 ರನ್ ಗಳಿಸಿ ಗೆಲುವು ಸಾಧಿಸಿತು.