ನವದೆಹಲಿ: 2ನೇ ಆವೃತ್ತಿಯ ಮಹಿಳಾ ಪ್ರೀಮಿಯರ್ ಲೀಗ್ನಲ್ಲಿ ಚೊಚ್ಚಲ ಚಾಂಪಿಯನ್ ಕಿರೀಟ ಮುಡಿಗೇರಿಸಿಕೊಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಹಿಳಾ ತಂಡದ ನಾಯಕಿ ಸ್ಮೃತಿ ಮಂಧಾನ, ಲೆಜೆಂಡ್ ಎಂ.ಎಸ್ ಧೋನಿ ಅವರ ಟ್ರೆಂಡ್ ಅನ್ನೇ ಮುಂದುವರಿಸಿದ್ದಾರೆ.
ಹೌದು. ಡಬ್ಲ್ಯೂಪಿಎಲ್ ಫೈನಲ್ ಪಂದ್ಯದಲ್ಲಿ ಅಮೋಘ ಜಯ ಸಾಧಿಸಿದ ನಂತರ ವೇದಿಕೆ ಮೇಲೆ ಟ್ರೋಫಿ ಸ್ವೀಕರಿಸಿದ ಸ್ಮೃತಿ ಮಂಧಾನ, ಶ್ರೇಯಾಂಕಾ ಪಾಟೀಲ್ ಅವರಿಗೆ ಟ್ರೋಫಿ ನೀಡಿ ಬಳಿಕ ಹಿಂದೆ ನಿಂತು ಫೋಟೋಗೆ ಫೋಸ್ ನೀಡಿದರು. ಇದು ಪ್ರೇಕ್ಷಕರ ಗಮನ ಸೆಳೆಯಿತು. ಸಿಎಸ್ಕೆ ತಂಡ 5 ಬಾರಿ ಐಪಿಎಲ್ನಲ್ಲಿ ಚಾಂಪಿಯನ್ ಪಟ್ಟಕ್ಕೇರಿದಾಗಲೂ ಧೋನಿ ಟ್ರೋಫಿ ಪಡೆಯುತ್ತಿದ್ದಂತೆ ಅದನ್ನು ಸಹ ಆಟಗಾರರಿಗೆ ನೀಡಿ ಪ್ರೋತ್ಸಾಹಿಸುತ್ತಾ ಬಂದಿದ್ದಾರೆ. 2023ರಲ್ಲಿ ಟ್ರೋಫಿ ಗೆದ್ದಾಗಲೂ ಧೋನಿ ಟ್ರೋಫಿಯನ್ನ ಸಹ ಆಟಗಾರರಿಗೆ ನೀಡಿ ತಾನು ಹಿಂದೆ ನಿಂತು ಸಂಭ್ರಮಿಸಿದ್ದರು. ಈಗ ಸ್ಮೃತಿ ಮಂಧಾನ ಅವರೂ ಧೋನಿಯ ಟ್ರೆಂಡ್ ಅನ್ನೇ ಮುಂದುವರಿಸಿದ್ದಾರೆ. ಇದರಿಂದ ಸ್ಮೃತಿ ನಾಯಕತ್ವಕ್ಕೆ ಅಭಿಮಾನಿಗಳು ಭೇಷ್ ಎಂದಿದ್ದಾರೆ.
ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಮಹಿಳಾ ಪ್ರೀಮಿಯರ್ ಲೀಗ್ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡ 18.3 ಓವರ್ಗಲ್ಲಿ 113 ರನ್ ಗಳಿಗೆ ಆಲೌಟ್ ಆಯಿತು. 114 ರನ್ಗಳ ಗುರಿ ಬೆನ್ನತ್ತಿದ ಆರ್ಸಿಬಿ 19.3 ಓವರ್ಗಳಲ್ಲೇ 2 ವಿಕೆಟ್ ನಷ್ಟಕ್ಕೆ 115 ರನ್ ಗಳಿಸಿ ಗೆಲುವು ಸಾಧಿಸಿತು.
ಇದಕ್ಕೂ ಮುನ್ನ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪರ ನಾಯಕಿ ಮೆಗ್ ಲ್ಯಾನ್, ಶಫಾಲಿ ವರ್ಮಾ ಸ್ಫೋಟಕ ಪ್ರದರ್ಶನ ತೋರಿದ್ದರು. ಪವರ್ ಪ್ಲೇನಲ್ಲಿ 6 ಓವರ್ಗಳಿಗೆ ಯಾವುದೇ ವಿಕೆಟ್ ನಷ್ಟವಿಲ್ಲದೇ 61 ರನ್ ಬಾರಿಸಿದ್ದರು. ಇದರಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡ 200 ರನ್ಗಳ ಗಡಿ ದಾಟಲಿದೆ ಎಂದು ನಿರೀಕ್ಷಿಸಲಾಗಿತ್ತು. ಪವರ್ ಪ್ಲೇ ಮುಗಿಯುತ್ತಿದ್ದಂತೆ ಪೆವಿಲಿಯನ್ ಪೆರೇಡ್ ನಡೆಸಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಮುಂದಿನ 49 ರನ್ ಗಳಿಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡಿತು