ಬೆಂಗಳೂರು- ಈ ಸಲ ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಗೀತಾ ಶಿವರಾಜ್ ಕುಮಾರ್ ಕಣಕ್ಕಿಳಿಯುತ್ತಿರೋದು ಹಳೇ ಸುದ್ಧಿ. ಸ್ಯಾಂಡಲ್ ವುಡ್ ಗೂ ರಾಜಕೀಯಕ್ಕೂ ಅಂದಿನಿಂದಲೂ ಒಂದು ಬಿಗ್ ಕನೆಕ್ಷನ್ ಇದ್ದೇ ಇದೆ. ಲೋಕಸಭಾ ಚುನಾವಣೆಗೆ ಕೌಂಟ್ ಡೌನ್ ಶುರುವಾಗಿರುವಾಗ್ಲೇ, ದೊಡ್ಮನೆ ಸೊಸೆ ಗೀತಾ ಶಿವರಾಜ್ ಕುಮಾರ್ ಶಿವಮೊಗ್ಗದಲ್ಲಿ ಕಾಂಗ್ರೆಸ್ ನಿಂದ ಟಿಕೆಟ್ ಸಿಕ್ಕಿದೆ. ರಾಜ್ ಕುಟುಂಬಕ್ಕೂ, ರಾಜಕೀಯಕ್ಕೂ ಏನೋ ದೂರ ಎಂಬ ಸಾಲುಸಾಲು ಟೀಕೆಗಳ ಬೆನ್ನಲ್ಲೂ ಗೀತಾ ಶಿವರಾಜ್ ಕುಮಾರ್ ನಡೆ ಕುತೂಹಲ ಮೂಡಿಸಿದೆ. ಈದೀಗ ಗೀತಾರವರಿಗೆ ಕನ್ನಡ ಸಿನಿಮಾ ಇಂಡಸ್ಟ್ರಿಯ ಅನ್ನದಾತರ ಬೆಂಬಲವೂ ಹೊಸ ಹುರುಪು ಕೊಡ್ತಿರೋದು ಸುಳ್ಳಲ್ಲ..!
ಸೀದಾ ವಿಚಾರಕ್ಕೆ ಬರೋದಾದ್ರೆ, ಸೋಮವಾರ(18)ರಂದು ಬೆಂಗಳೂರಿನ ಮಾನ್ಯತಾ ಟೆಕ್ ಪಾರ್ಕ್ ಬಳಿಯ ಶಿವರಾಜ್ ಕುಮಾರ್ ನಿವಾಸದಲ್ಲಿ ಚಿತ್ರರಂಗಕ್ಕೆ ಸಂಬಂಧಿಸಿದ ಹಲವು ಗಣ್ಯರು, ನಿರ್ಮಾಪಕರು, ವಿತರಕರು, ಪ್ರದರ್ಶಕರು ಗೀತಾ ಶಿವರಾಜ್ ಕುಮಾರ್ ಗೆ ಈ ಸಲದ ಲೋಕಸಭಾ ಎಲೆಕ್ಷನ್ ಗೆ ಬೆಂಬಲ ಸೂಚಿಸೋಕೆ ಬಂದ್ರು. ಸುದ್ಧಿಗೋಷ್ಟಿಯೂ ಬಹಳ ಬಿಸಿಯಲ್ಲೇ ನಡೆಯಿತು. ಗೀತಾ ಶಿವರಾಜ್ ಕುಮಾರ್ ಕೂಡ ಭವಿಷ್ಯದ ಚುನಾವಣಾ ಆಲೋಚನೆಗಳನ್ನ ತಮ್ಮ ಸಹೋದರ ಮಧುಬಂಗಾರಪ್ಪ ಸಮ್ಮುಖದಲ್ಲೇ ಬಿಚ್ಚಿಟ್ರು. ಶಿವಣ್ಣ ‘ನಾನು ಯಾವಾಗಲೂ ಗೀತಾ ಪರವಾಗಿ ಇದ್ದೇ ಇರ್ತೀನಿ’ ಅಂತ ಪ್ರಚಾರದ ಪ್ಲಾನ್ ತೆರೆದಿಟ್ರು. ಇತ್ತೀಚೆಗೆ ಆರ್.ಸಿ.ಬಿ ಮಹಿಳಾ ತಂಡ ಗೆದ್ದಿದೆ. ‘ಹೆಣ್ಣು ಮಕ್ಕಳೇ ಸ್ಟ್ರಾಂಗ್ ಗುರು’ ಎಂಬ ಮಾತು ಎಲ್ಲಕಡೇ ಸಾರ್ವಕಾಲಿಕವಾಗಿ ವೈರಲ್ ಆಗ್ತಿದೆ. ಶಿವಣ್ಣರೇ ಖುದ್ದು ರಾಜಕೀಯಕ್ಕೆ ಹೆಣ್ಣುಮಕ್ಕಳು ಹೆಚ್ಚುಹೆಚ್ಚು ಬರಬೇಕು ಎಂದಿದ್ದಾರೆ. ಆದರೆ ಮಹಿಳಾ ಶಕ್ತಿಪ್ರದರ್ಶನವಾಗಬೇಕಿದ್ದ ಇದೇ ಕಾರ್ಯಕ್ರಮದಲ್ಲಿ ನಡೆದಿದ್ದೇ ಬೇರೆ..!
‘ಪ್ರಿಯಾ ಹಾಸನ್’ ಈಗೀನ ಡಿಜಿಟಲ್ ಸಿನಿಮಾಪ್ರೇಮಿಗಳಿಗೆಲ್ಲರಿಗೂ ಗೊತ್ತಿಲ್ಲದ ಹೆಸರು. ನಟಿ, ನಿರ್ದೇಶಕಿ, ನಿರ್ಮಾಪಕಿ ಪ್ರಿಯಾ ಹಾಸನ್ ‘ಜಂಭದ ಹುಡುಗಿ’ಯಾಗಿಯೇ ಗಾಂಧಿನಗರಕ್ಕೆ ಪರಿಚಯ. ಹಾಗಂತ ಪ್ರಿಯಾಗೆ ಜಂಭ ಇದೆ ಅಂತಲ್ಲ. ಇಂದಿನ ನ್ಯಾಷನಲ್ ಐಕಾನ್, ರಾಕಿಂಗ್ ಸ್ಟಾರ್ ಯಶ್ ತಮ್ಮ ಸಿನಿಕೆರಿಯರ್ ಶುರುಮಾಡಿದ್ದು ಇದೇ ‘ಜಂಭದಹುಡುಗಿ’ ಸಿನಿಮಾದಿಂದ..! ಯಶ್ ‘ಪ್ರೀತಿ ಇಲ್ಲದ ಮೇಲೆ’ ಸೀರಿಯಲ್ ನಲ್ಲಿ ಗುರುತಿಸಿಕೊಳ್ತಿರುವಾಗ್ಲೇ, ಪ್ರಿಯಾ ಟಿವಿಯಲ್ಲಿ ಯಶ್ ನಟನೆ ನೋಡಿ ಜಂಭದ ಹುಡುಗಿಗೆ ಸೆಲೆಕ್ಟ್ ಮಾಡಿದ್ರು. ಪ್ರಿಯಾ ಹಾಸನ್ ಸದ್ಯಕ್ಕೆ ಸಿನಿಮಾರಂಗದಲ್ಲಿ ಆಕ್ಟಿವ್ ಆಗಿಲ್ಲವಾದ್ರೂ, ಚಿತ್ರರಂಗದ ಆಗುಹೋಗುಗಳು ಪ್ರಿಯಾಗೆ ಹೊಸತಲ್ಲ. ಪ್ರಿಯಾ ಹಾಸನ್ ಮಹಿಳಾ ಪರವಾಗಿ ಧ್ವನಿಯೆತ್ತಿದ್ದಾರೆ. ಅನೇಕ ಸಂದರ್ಭಗಳಲ್ಲಿ ಹೋರಾಟನಿರತ ಹೆಣ್ಣುಮಕ್ಕಳ ಜೊತೆಗೂಡಿ ಹೋರಾಟಕ್ಕಿಳಿದ್ದಾರೆ. ಗೀತಾ ಶಿವರಾಜ್ ಕುಮಾರ್ ಗೆ ಬೆಂಬಲ ಸೂಚಿಸೋಕೆ ಬಂದ ಪ್ರಿಯಾ ಹಾಸನ್ ಗೆ ಅದೇ ವೇದಿಕೆಯಲ್ಲೇ ಇರುಸು-ಮುರುಸು ಉಂಟಾಗಿದ್ದು ದುರಂತ. ನಿರ್ಮಾಪಕರೆಲ್ಲರೂ ಮಾತನಾಡಿಯಾದ ಮೇಲೆ, ಪ್ರಿಯಾ ಹಾಸನ್ ಗೂ ಮಾತನಾಡಬೇಕು ಎಂಬ ಆಸೆಯಿತ್ತು. ಮಹಿಳಾ ಸಬಲಿಕರಣದ ಬಗ್ಗೆ ಗೀತಾರವರು ಏನೆಲ್ಲಾ ಮಾಡಬಹುದು ಎಂಬುದನ್ನೂ ಪ್ರಿಯಾ ಹಾಸನ್ ಹೇಳಬೇಕಿತ್ತು. ಮೇಲಾಗಿ ಅಲ್ಲಿದ್ದ ಮಹಿಳಾಮಣಿಯರು ಬೆರಳಣಿಕೆಯಷ್ಟು. ಕಾರ್ಯಕ್ರಮ ಮುಗಿದ ಮೇಲೆ ಕಾಟಚಾರಕ್ಕೆ ಎನ್ನುವಂತೆ ಪ್ರಿಯಾಗೆ ಮೈಕ್ ಸಿಕ್ಕಿದ್ದು, ಪ್ರಿಯಾ ಮಾತನಾಡಿದ್ದನ್ನ ಕೇಳುವ ಸಂಯಮ ಯಾರಿಗೂ ಇಲ್ಲದೇ ಹೋಗಿದ್ದು ನಿಜಕ್ಕೂ ವಿಷಾದನೀಯ.
ಒಂದು ಸಭೆ, ಕಾರ್ಯಕ್ರಮ, ಸುದ್ಧಿಗೋಷ್ಟಿ ಆದಮೇಲೆ ಸಮಯದ ಅಭಾವ ಸಹಜವೇ..! ಎಲ್ಲರಿಗೂ ಮಾತನಾಡೋಕೆ ಅವಕಾಶ ಕಲ್ಪಿಸೋದು ಅಸಾಧ್ಯ. ಆದರೆ ಪ್ರಿಯಾಹಾಸನ್ ಗೆ ಮಾತನಾಡೋಕೆ ಚಿಕ್ಕಸಮಯವನ್ನಾದ್ರೂ ಕೊಡಬೇಕಿತ್ತು ಎಂಬ ಅಭಿಪ್ರಾಯ ಅಲ್ಲಿನ ನಿರ್ಮಾಪಕರಿಂದಲೇ ಕೇಳಿಬಂತು. ಇದು ಗೀತಾ ಶಿವರಾಜ್ ಕುಮಾರ ರವರ ಗಮನಕ್ಕೆ ಬಂತೋಇಲ್ವೋ ಗೊತ್ತಿಲ್ಲ. ಆದರೂ ಅಲ್ಲಿ ಆದ ಅವಮಾನಕ್ಕೆ ಬೇಸರಸಿಕೊಳ್ಳದೇ ನಂತರ ಪ್ರಿಯಾ ಹಾಸನ್ ಮಾಧ್ಯಮಗಳಿಗೆ ಮಾತನಾಡಿದ್ದಾರೆ. ‘ಒಬ್ಬ ಮಹಿಳೆ ಮನಸ್ಸು ಮಾಡಿದ್ರೆ ಏನ್ ಬೇಕಾದ್ರೂ ಮಾಡಬಹುದು. ದಿವಂಗತ ಪಾರ್ವತಮ್ಮ ರಾಜ್ ಕುಮಾರ್ ಇದಕ್ಕೆ ಪರಿಪೂರ್ಣ ಸಾಕ್ಷಿ. ಶಿವಣ್ಣ ಮಹಿಳೆಯರ ಮೇಲೆ ಇಟ್ಕೊಂಡಿರೋ ಪ್ರೋತ್ಸಾಹಕರ ದೃಷ್ಟಿ ತುಂಬಾ ಖುಷಿ ಕೊಡುತ್ತೆ. ಗೀತಾಕ್ಕನಿಗೆ ನೀವೆಲ್ಲರೂ ಸಪೊರ್ಟ್ ಮಾಡಿ’ ಎಂದಿದ್ದಾರೆ. ಹೆಣ್ಣುಮಕ್ಕಳಿಗೆ ಸಿಗಬೇಕಾದ ಸ್ಥಾನಮಾನದ ಬಗ್ಗೆ ಭಾಷಣ ಮಾಡಿದ್ರೆ ಸಾಲದು, ಅದನ್ನ ಕಾರ್ಯರೂಪಕ್ಕೂ ತರಬೇಕು ಎಂಬುದನ್ನ ನಾವೆಲ್ಲರೂ ಅರ್ಥಮಾಡಿಕೊಂಡ್ರೆ ಸಮಯೋಚಿತ ಅಲ್ವಾ..? ಏನಂತೀರಾ..?
-ಮಾವಳ್ಳಿ ಕಾರ್ತಿಕ್. ಫಿಲಂ ಡೆಸ್ಕ್. ಪ್ರಜಾಟಿವಿ