ಭಾರತೀಯ ಬಹುರಾಷ್ಟ್ರೀಯ ಕಾರ್ಪೊರೇಶನ್ ಇನ್ಫೋಸಿಸ್ ಲಿಮಿಟೆಡ್ ಸ್ಥಾಪನೆಯ ಹಿಂದಿನ ಅನೇಕ ಅದ್ಭುತ ಮನಸ್ಸಿನವರಲ್ಲಿ ಒಬ್ಬರು ಎನ್. ಆರ್. ನಾರಾಯಣ ಮೂರ್ತಿ ಅವರು ಸಮಕಾಲೀನ ಕಾಲದ ಅತಿದೊಡ್ಡ ಭಾರತೀಯ ಕೈಗಾರಿಕೋದ್ಯಮಿಗಳಲ್ಲಿ ಒಬ್ಬರು. ಇನ್ಫೋಸಿಸ್ ಒಂದು ದೊಡ್ಡ ಮಾಹಿತಿ ತಂತ್ರಜ್ಞಾನ ಕಂಪನಿಯಾಗಿದ್ದು, ವ್ಯಾಪಾರ ಸಲಹಾ, ಮಾಹಿತಿ ತಂತ್ರಜ್ಞಾನ ಮತ್ತು ಹೊರಗುತ್ತಿಗೆ ಸೇವೆಗಳನ್ನು ಒದಗಿಸುತ್ತಿದೆ ಮತ್ತು ಅದರ ಯಶಸ್ಸನ್ನು ಖಚಿತಪಡಿಸಿಕೊಳ್ಳುವಲ್ಲಿ ನಾರಾಯಣ ಮೂರ್ತಿ ಅವರು ಮಹತ್ತರವಾದ ಪಾತ್ರವನ್ನು ವಹಿಸಿದ್ದಾರೆ.
ಇಷ್ಟೆಲ್ಲಾ ಸಾಧನೆ ಮಾಡಿದ ಇವರು ಮೊಮ್ಮಗನಿಗೆ ಭರ್ಜರಿ ಗಿಫ್ಟ್ ಕೊಟ್ಟಿದ್ದಾರೆ. ಹೌದು 240 ಕೋಟಿ ರೂಪಾಯಿ ಮೌಲ್ಯದ 15 ಲಕ್ಷ ಷೇರುಗಳನ್ನು ತಮ್ಮ ಪ್ರೀತಿಯ ಮೊಮ್ಮಗ ಏಕಾಗ್ರಹ ರೋಹನ್ ಮೂರ್ತಿಗೆ ಉಡುಗೊರೆಯಾಗಿ ನೀಡಿದ್ದಾರೆ. ಮುಂಬೈ ಷೇರು ವಿನಿಮಯ ಕೇಂದ್ರ ಈ ಬಗ್ಗೆ ಅಧಿಕೃತ ಮಾಹಿತಿಯನ್ನು ಹಂಚಿಕೊಂಡಿದೆ. ಎನ್ಆರ್ ನಾರಾಯಣ ಮೂರ್ತಿ ಅವರು ತಮ್ಮ ಮೊಮ್ಮಗನಿಗೆ ಕೊಟ್ಟ ಉಡುಗೊರೆಯಿಂದಾಗಿ ಕಂಪನಿಯಲ್ಲಿ ಮೂರ್ತಿ ಅವರಿಗಿದ್ದ 0.40% ಷೇರು ಕಡಿತವಾಗಿ 0.36% ನಾರಾಯಣ ಮೂರ್ತಿ ಅವರ ಬಳಿ ಉಳಿದಿದೆ.
ನಾರಾಯಣ ಮೂರ್ತಿ ಮತ್ತು ಸುಧಾ ಮೂರ್ತಿ ಅವರ ಪುತ್ರ ರೋಹನ್ ಮೂರ್ತಿ 2011ರಲ್ಲಿ ಅಪರ್ಣಾ ಕೃಷ್ಣನ್ ಎಂಬುವವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಕಳೆದ ವರ್ಷ ನವೆಂಬರ್ 10ರಂದು ಏಕಗ್ರಹ ಎಂಬ ಗಂಡು ಮಗ ಜನಿಸಿದ. ಇದೀಗ ರೋಹನ್ ಮೂರ್ತಿ ಮತ್ತು ಅಪರ್ಣಾ ಕೃಷ್ಣನ್ ಅವರಿಗೆ ಜನಿಸಿದ 4 ತಿಂಗಳ ಮಗುವಿಗೆ ಎನ್ಆರ್ ನಾರಾಯಣ ಮೂರ್ತಿ ಅವರು ಬರೋಬ್ಬರಿ 240 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ಷೇರುಗಳನ್ನು ಉಡುಗೊರೆಯಾಗಿ ನೀಡಿದ್ದಾರೆ. ಇದರಿಂದ ಏಕಾಗ್ರಹ ರೋಹನ್ ಮೂರ್ತಿ ಭಾರತದ ಅತ್ಯಂತ ಕಿರಿಯ ಕೋಟ್ಯಧಿಪತಿ ಎಂಬ ಕೀರ್ತಿಗೆ ಪಾತ್ರನಾಗಿದ್ದಾನೆ.