ಉತ್ತರ ಪ್ರದೇಶ: ತನ್ನ ಅಣ್ಣನನ್ನೇ ತಂಗಿಯೊಬ್ಬಳು ವಿವಾಹವಾದ ಘಟನೆ ಬೆಳಕಿಗೆ ಬಂದಿದೆ. ಹೌದು ಉತ್ತರ ಪ್ರದೇಶದ ಮಹಾರಾಜ ಗಂಜ್ ಪ್ರದೇಶದಲ್ಲಿ ಮಾರ್ಚ್ 5 ರಂದು ಆಯೋಜನೆ ಮಾಡಲಾಗಿದ್ದ ಸಾಮೂಹಿಕ ವಿವಾಹ ಕಾರ್ಯಕ್ರಮದ ವೇಳೆ ಈ ಘಟನೆ ಬೆಳಕಿಗೆ ಬಂದಿದ್ದು, ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ಧಾರೆ.
ಸಾಮೂಹಿಕ ವಿವಾಹ ಯೋಜನೆಯಡಿ ಪ್ರೀತಿ ಯಾದವ್ ಎಂಬುವರು ಮದುವೆ ಆಗಬೇಕಿತ್ತು. ಆದರೆ ವರ ಮಹಾಶಯ ರಮೇಶ್ ಯಾದವ್ ಸೂಕ್ತ ಸಮಯಕ್ಕೆ ಮದುವೆ ಮಂಟಪಕ್ಕೆ ಬಂದಿರಲಿಲ್ಲ. ಹೀಗಾಗಿ, ಯೋಜನೆಯ ಧನ ಸಹಾಯ ಕೈ ತಪ್ಪಿ ಹೋಗಬಾರದು ಎಂಬ ಕಾರಣಕ್ಕೆ ಬ್ರೋಕರ್ ನೀಡಿದ ಸಲಹೆ ಆಧರಿಸಿ ತನ್ನ ಸಹೋದರ ಕೃಷ್ಣಾ ಎಂಬಾತನನ್ನ ಪ್ರೀತಿ ವಿವಾಹ ಆಗಿದ್ದಾರೆ.
ಈ ಪ್ರಕರಣದ ತನಿಖೆ ನಡೆಸಿದಾಗ ಮತ್ತೊಂದು ಆಘಾತಕಾರಿ ಸಂಗತಿ ಕೂಡಾ ಬೆಳಕಿಗೆ ಬಂದಿದೆ. ರಮೇಶ್ ಯಾದವ್ ಅವರನ್ನ ಪ್ರೀತಿ ಯಾದವ್ ಈ ಹಿಂದೆಯೇ ಮದುವೆ ಆಗಿದ್ದರೂ ಕೂಡಾ ಸಾಮೂಹಿಕ ವಿವಾಹ ಯೋಜನೆ ಅಡಿ 51 ಸಾವಿರ ರೂಪಾಯಿ ಆರ್ಥಿಕ ಸಹಾಯ ಪಡೆಯುವ ಉದ್ದೇಶದಿಂದ ಮತ್ತೊಂದು ಮದುವೆಯಾಗಲು ಸಿದ್ದವಾಗಿದ್ದರು.
ಆದರೆ ಮುಹೂರ್ತದ ಸಮಯಕ್ಕೆ ರಮೇಶ್ ಯಾದವ್ ಬಾರದ ಕಾರಣ ತನ್ನ ಸಹೋದರನ್ನೇ ಮದುವೆ ಮಾಡಿಕೊಂಡ ನಾಟಕ ಆಡಿದ್ದರು ಎಂದು ತಿಳಿದು ಬಂದಿದೆ. ಇದೀಗ ತನ್ನ ಸಹೋದರಿಯನ್ನೇ ಮದುವೆಯಾದ ವ್ಯಕ್ತಿ ವಿರುದ್ಧವೂ ಪ್ರಕರಣ ದಾಖಲಾಗಿದ್ದು, ಪೊಲೀಸರು ಸಮಗ್ರವಾಗಿ ತನಿಖೆ ನಡೆಸುತ್ತಿದ್ದಾರೆ. ಈ ಪ್ರಕರಣ ಸಂಬಂಧ ಗ್ರಾಮ ಅಭಿವೃದ್ದಿ ಅಧಿಕಾರಿಯನ್ನೂ ಅಮಾನತು ಮಾಡಲಾಗಿದೆ. ಇದಲ್ಲದೆ ವಧು – ವರರ ದಾಖಲೆ ಪರಿಶೀಲನೆ ಮಾಡಿದ ಅಧಿಕಾರಿಗಳ ವಿರುದ್ದವೂ ಸೂಕ್ತ ಕ್ರಮ ಕೈಗೊಳ್ಳಲು ಆದೇಶ ನೀಡಲಾಗಿದೆ.