ವಿಶ್ವದಾದ್ಯಂತ ಕೋಟ್ಯಾಂತರ ಅಭಿಮಾನಿಗಳನ್ನು ಹೊಂದಿರುವ ಹಾಲಿವುಡ್ ನ ಖ್ಯಾತ ಡಿ ಜೆ ಅಲೆನ್ ವಾಕರ್ ಮಾಸ್ಕ್ ಧರಿಸದೆ ಮನೆಯಿಂದ ಹೊರಗೆ ಕಾಲಿಡುವುದಿಲ್ಲ. ಸದಾ ಮಾಸ್ಕ್ ಧರಿಸಿ ಮುಖ ಮುಚ್ಚಿಕೊಂಡೆ ಇರುವ ಅಲೆನ್ ತಮ್ಮನ್ನು ಯಾರು ಗುರುತಿಸದಿರಲಿ ಎಂಬ ಕಾರಣಕ್ಕೆ ಮಾಸ್ಕ್ ಧರಿಸುವುದಾಗಿ ಹೇಳಿದ್ದಾರೆ.
ಅಷ್ಟಕ್ಕೂ ಅಲೆನ್ ಮಾಸ್ಕ್ ಹಾಕಿಕೊಂಡೇ ಇರುವುದು ಯಾಕೆ? ಕೋವಿಡ್ ನಂತರವೂ ಅವರು ಮಾಸ್ಕ್ ಹಾಕಿಕೊಳ್ಳುವುದು ಯಾಕೆ ಎಂದು ಹಲವರು ಪ್ರಶ್ನೆ ಮಾಡಿದ್ದಾರೆ. ಅಂದ ಹಾಗೆ ಸಂಗತಿ ಕೋವಿಡ್ ಗಿಂತ ಮುಂಚೆಯೇ ಅವರು ಮಾಸ್ಕ್ ಧರಿಸಿಕೊಂಡೇ ಓಡಾಡುತ್ತಿದ್ದರಂತೆ. ಅವರೇ ಸಂದರ್ಶನವೊಂದರಲ್ಲಿ ಹೇಳಿಕೊಂಡಂತೆ 2015ರಿಂದ ನಿರಂತವಾಗಿ ಮಾಸ್ಕ್ ಧರಿಸುತ್ತಿದ್ದಾರಂತೆ.
ಬೆಂಗಳೂರಿನಲ್ಲಿ ನಡೆದ ಆರ್.ಸಿ.ಬಿ ಅನ್ ಬಾಕ್ಸ್ ಕಾರ್ಯಕ್ರಮಕ್ಕೂ ಅಲೆನ್ ಆಗಮಿಸಿದ್ದರು. ಆಗಲೂ ಅವರು ಮಾಸ್ಕ್ ಧರಿಸಿಕೊಂಡೇ ಇದ್ದರು. ಕಾರ್ಯಕ್ರಮದಲ್ಲಾದರೂ ಅವರು ಮಾಸ್ಕ್ ತೆಗೆಯುತ್ತಾರೆ ಎನ್ನುವ ನಂಬಿಕೆ ಇತ್ತು. ಆದರೆ, ಅವರು ಕೊನೆಗೂ ಮಾಸ್ಕ್ ತಗೆಯಲಿಲ್ಲ. ಹಾಗೆಯೇ ಕಾರ್ಯಕ್ರಮ ನಡೆಸಿಕೊಟ್ಟು ಮತ್ತಷ್ಟು ಕುತೂಹಲ ಮೂಡಿಸಿದರು.
ಮಾಸ್ಕ್ ಇಲ್ಲದೇ ಓಡಾಡಿದರೆ, ಜನರು ತಮ್ಮನ್ನು ಬಹುಬೇಗ ಗುರುತಿಸುತ್ತಾರಂತೆ. ಹಾಗಾಗಿ ತಮ್ಮ ಖಾಸಗಿ ಕ್ಷಣಗಳಿಗೆ ಧಕ್ಕೆ ಆಗುತ್ತದೆ. ಜನರು ಗುರುತಿಸದಂತೆ ಓಡಾಡಿದರೆ ನೆಮ್ಮದಿ. ಅಲ್ಲದೆ ದೇವರ ದೃಷ್ಟಿಯಲ್ಲಿ ಎಲ್ಲರೂ ಸಮಾನರು. ಸಮಾನರಂತೆಯೇ ಇರಬೇಕು. ನನಗೆ ಮಾಸ್ಕ್ ಆ ರೀತಿಯ ಸಂದೇಶವನ್ನು ನೀಡುತ್ತದೆ ಎಂದು ಭಾವಿಸಿದ್ದೇನೆ. ಸಮಾನತೆಗಾಗಿ ನಾನು ಸದಾ ಮಾಸ್ಕ್ ಧರಿಸುತ್ತೇನೆ ಎಂದು ತಾವು ಮಾಸ್ಕ್ ಧರಿಸುವುದಕ್ಕೆ ಅಲೆನ್ ಕಾರಣ ನೀಡಿದ್ದಾರೆ.