ಶಸ್ತ್ರಸಜ್ಜಿತ ಬಲೂಚ್ ಭಯೋತ್ಪಾದಕರು ಗ್ವಾದರ್ ಬಂದರು ಕಾಂಪ್ಲೆಕ್ಸ್ಗೆ ನುಗ್ಗಿ ಗುಂಡಿನ ದಾಳಿ ನಡೆಸಿದ್ದಾರೆ. ಪಾಕಿಸ್ತಾನದ ಪ್ರಕ್ಷುಬ್ಧ ಬಲೂಚಿಸ್ತಾನ್ ಪ್ರಾಂತ್ಯದ ಪ್ರದೇಶದಲ್ಲಿ ಹಲವಾರು ಸ್ಫೋಟಗಳು ಸಂಭವಿಸಿವೆ.
ತೀವ್ರ ಗುಂಡಿನ ಚಕಮಕಿ ಹಿನ್ನಲೆ ಪೊಲೀಸ್ ಮತ್ತು ಭದ್ರತಾ ಪಡೆಗಳ ದೊಡ್ಡ ತುಕಡಿ ಸ್ಥಳಕ್ಕೆ ತಲುಪಿದೆ ಎಂದು ಮಕ್ರನ್ ಕಮಿಷನರ್ ಸಯೀದ್ ಅಹ್ಮದ್ ಉಮ್ರಾನಿ ಹೇಳಿದ್ದಾರೆ. ಗ್ವಾದರ್ ಪೋರ್ಟ್ ಅಥಾರಿಟಿ ಸಂಕೀರ್ಣದ ಮೇಲಿನ ದಾಳಿಯನ್ನು ಭದ್ರತಾ ಪಡೆಗಳು ವಿಫಲಗೊಳಿಸಿದ್ದು ಎಂಟು ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿದೆ ಎಂದು ಎಕ್ಸ್ಪ್ರೆಸ್ ಟ್ರಿಬ್ಯೂನ್ ಪತ್ರಿಕೆ ವರದಿಯಲ್ಲಿ ಉಲ್ಲೇಖಿಸಿದೆ.
ಕಾಂಪ್ಲೆಕ್ಸ್ಗೆ ಪ್ರವೇಶಿಸಲು ಪ್ರಯತ್ನಿಸುತ್ತಿದ್ದಾಗ ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿದೆ ಎಂದು ವರದಿ ತಿಳಿಸಿದೆ. ನಿಷೇಧಿತ ಬಲೂಚಿಸ್ತಾನ್ ಲಿಬರೇಶನ್ ಆರ್ಮಿ (ಬಿಎಲ್ಎ)ದ ಮಜೀದ್ ಬ್ರಿಗೇಡ್ ದಾಳಿಯ ಹೊಣೆ ಹೊತ್ತುಕೊಂಡಿದೆ. ಇರಾನ್ ಮತ್ತು ಅಫ್ಘಾನಿಸ್ತಾನದ ಗಡಿಯಲ್ಲಿರುವ ಬಲೂಚಿಸ್ತಾನ್ ದೀರ್ಘಾವಧಿಯ ಹಿಂಸಾತ್ಮಕ ದಂಗೆಗೆ ನೆಲೆಯಾಗಿದೆ.
ಬಲೂಚ್ ದಂಗೆಕೋರ ಗುಂಪುಗಳು ಈ ಹಿಂದೆ ಶತಕೋಟಿ ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್ (CPEC) ಯೋಜನೆಗಳನ್ನು ಗುರಿಯಾಗಿಸಿಕೊಂಡು ಹಲವಾರು ದಾಳಿಗಳನ್ನು ನಡೆಸಿದ್ದವು. ಗಡಿಯಾಚೆಗಿನ ಭಯೋತ್ಪಾದನೆಯ ಯಾವುದೇ ಕೃತ್ಯವನ್ನು ತಮ್ಮ ಸರ್ಕಾರ ಸಹಿಸುವುದಿಲ್ಲ ಎಂದು ಪ್ರಧಾನಿ ಶೆಹಬಾಜ್ ಷರೀಫ್ ಹೇಳಿದ ದಿನವೇ ಈ ದಾಳಿ ನಡೆದಿದೆ.