ಬೆಂಗಳೂರು: ಬಹುನಿರೀಕ್ಷಿತ ಇಂಡಿಯನ್ ಪ್ರೀಮಿಯರ್ ಲೀಗ್ನ 17ನೇ ಆವೃತ್ತಿ ಆರಂಭಗೊಳ್ಳಲು ಒಂದು ದಿನವಷ್ಟೇ ಬಾಕಿಯಿದೆ.
ಮಾರ್ಚ್ 22ರಿಂದ ಮಹತ್ವದ ಟೂರ್ನಿ ಆರಂಭವಾಗಲಿದ್ದು, ಉದ್ಘಾಟನಾ ಪಂದ್ಯದಲ್ಲೇ ಹಾಲಿ ಚಾಂಪಿಯನ್ಸ್ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳ ನಡುವೆ ಸೆಣಸಾಟ ನಡೆಯಲಿದೆ. ಚೆನ್ನೈನ ಚಿದಂಬರಂ (ಚೆಪಾಕ್) ಕ್ರಿಕೆಟ್ ಕ್ರೀಡಾಂಗಣದಲ್ಲಿ ಇತ್ತಂಡಗಳು ಕಾದಾಟ ನಡೆಸಲಿದ್ದು, ಹಣಾಹಣಿ ವೀಕ್ಷಿಸಲು ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ
ಅಲ್ಲದೇ ಈ ಬಾರಿ ಬೇಸಿಗೆಯ ಬಿಸಿ ಐಪಿಎಲ್ ಟೂರ್ನಿಗೂ ತಟ್ಟಿದ್ದು, ಪಂದ್ಯದ ವೇಳೆ ಮೈದಾನ ಹದಗೊಳಿಸಲು ಸಂಸ್ಕರಿಸಿದ ನೀರನ್ನು ಬಳಸಿಕೊಳ್ಳಲು ಮುಂದಾಗಿದೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಐಪಿಎಲ್ ಕ್ರಿಕೆಟ್ ಪಂದ್ಯಗಳಿಗೆ ಸಂಸ್ಕರಿಸಿದ ನೀರು ಪೂರೈಸಲು ಕ್ರಮ ಕೈಗೊಳ್ಳಲಾಗುವುದು ಎಂದು ಜಲಮಂಡಳಿ ಅಧ್ಯಕ್ಷ ಡಾ.ರಾಮ್ ಪ್ರಸಾತ್ ಮನೋಹರ್ ತಿಳಿಸಿದ್ದಾರೆ.
ಕ್ರೀಡಾಂಗಣಕ್ಕೆ ಸಂಸ್ಕರಿಸಿದ ನೀರನ್ನು ಪೂರೈಸುವಂತೆ ಆಡಳಿತ ಮಂಡಳಿ ಪದಾಧಿಕಾರಿಗಳು ರಾಮ್ ಪ್ರಸಾತ್ ಮನೋಹರ್ ಅವರನ್ನ ಭೇಟಿ ಮಾಡಿ, ಮನವಿಯನ್ನೂ ಸಲ್ಲಿಸಿದ್ದರು. ಪಂದ್ಯಾವಳಿ ಸಂದರ್ಭದಲ್ಲಿ ದಿನಕ್ಕೆ 75,000 ಲೀಟರ್ ನೀರು ಅವಶ್ಯಕತೆಯಿದ್ದು, ಕಬ್ಬನ್ ಪಾರ್ಕ್ನ ತ್ಯಾಜದ ನೀರನ್ನು ಸಂಸ್ಕರಿಸಿ, ಕ್ರೀಡಾಂಗಣಕ್ಕೆ ಪೂರೈಸುವಂತೆ ಕೋರಿದ್ದಾರೆ.