ಅಫ್ಘಾನಿಸ್ತಾನದ ಕಂದಹಾರ್ ನಲ್ಲಿ ನಡೆದ ಆತ್ಮಹತ್ಯಾ ಬಾಂಬ್ ದಾಳಿಯಲ್ಲಿ ಮೂವರು ಮೃತಪಟ್ಟಿದ್ದು 12 ಮಂದಿ ಗಾಯಗೊಂಡಿರುವುದಾಗಿ ಸ್ಥಳೀಯ ಪ್ರಾಂತೀಯ ಅಧಿಕಾರಿ ತಿಳಿಸಿದ್ದಾರೆ.
ಕಂದಹಾರ್ ನಗರದಲ್ಲಿ ನ್ಯೂ ಕಾಬೂಲ್ ಬ್ಯಾಂಕ್ ಎದುರು ಕಾಯುತ್ತಿದ್ದ ಜನರ ಗುಂಪನ್ನು ಗುರಿಯಾಗಿಸಿ ಸುಮಾರು 8 ಗಂಟೆಗೆ ಆತ್ಮಹತ್ಯಾ ಬಾಂಬ್ ದಾಳಿ ನಡೆದಿದ್ದು ಮೂವರು ಮೃತಪಟ್ಟಿದ್ದಾರೆ ಹಾಗೂ 12 ಮಂದಿ ಗಾಯಗೊಂಡಿದ್ದಾರೆ.
ಬಾಂಬ್ ದಾಳಿಯ ಹೊಣೆಯನ್ನು ಯಾವುದೇ ಸಂಘಟನೆ ವಹಿಸಿಕೊಂಡಿಲ್ಲ ಎಂದು ಕಂದಹಾರ್ ಪ್ರಾಂತದ ಮಾಹಿತಿ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕ ಇನಾಮುಲ್ಲಾ ಸಮಂಗನಿ ಹೇಳಿದ್ದಾರೆ.
ಅಗ್ನಿಶಾಮಕ ದಳ ಮತ್ತು ಭದ್ರತಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದು ಗಾಯಾಳುಗಳನ್ನು ಹಾಗೂ ಮೃತದೇಹಗಳನ್ನು ಆಸ್ಪತ್ರೆಗೆ ರವಾನಿಸಿದ್ದಾರೆ. ಪರಿಸ್ಥಿತಿ ನಿಯಂತ್ರಣದಲ್ಲಿದ್ದು ಬಾಂಬ್ ದಾಳಿಯ ಕುರಿತು ತನಿಖೆ ನಡೆಸಲಾಗುತ್ತಿದೆ.