ಭಾರತದ ವಿರುದ್ಧ ತಿರುಗಿಬಿದ್ದ ದ್ವೀಪ ರಾಷ್ಟ್ರ ಮಾಲ್ಡೀವ್ಸ್ಗೆ ಪೆಟ್ಟಿನ ಮೇಲೆ ಪೆಟ್ಟು ಬೀಳುತ್ತಿದೆ. ಐಸ್ಲ್ಯಾಂಡ್ಗೆ ತೆರಳುತ್ತಿದ್ದ ಭಾರತೀಯ ಪ್ರವಾಸಿಗರ ಸಂಖ್ಯೆ ಭಾರೀ ಕುಸಿತವಾಗಿದೆ. ಭಾರತೀಯ ಸೇನೆಯ ಮೊದಲ ಬ್ಯಾಚು ಮಾಲ್ಡೀವ್ಸ್ನಿಂದ ಕಾಲ್ತೆಗೆಯುತ್ತಿರುವ ಹೊತ್ತಿನಲ್ಲೇ ಭಾರತೀಯ ಪ್ರವಾಸಿಗರ ಸಂಖ್ಯೆ ಮಾಲ್ಡೀವ್ಸ್ನಲ್ಲಿ ಇಳಿಮುಖವಾಗುತ್ತಿದೆ. ಪ್ರತೀ ವರ್ಷ ಅತಿಹೆಚ್ಚು ಭಾರತೀಯ ಪ್ರವಾಸಿಗರನ್ನು ಬರಮಾಡಿಕೊಳ್ಳುತ್ತಿದ್ದ ಮಾಲ್ಡೀವ್ಸ್ ದೇಶಕ್ಕೆ ಈಗ ಭಾರತೀಯರ ಅನುಪಸ್ಥಿತಿ ಕಾಡುತ್ತಿದೆ.
ಭಾರತದಿಂದ ಮಾಲ್ಡೀವ್ಸ್ಗೆ ಪ್ರವಾಸ ಹೋಗುವವರ ಸಂಖ್ಯೆಯಲ್ಲಿ ಬಹಳ ಕಡಿಮೆ ಆಗಿದೆ. 2023ರಲ್ಲಿ ಮಾಲ್ಡೀವ್ಸ್ಗೆ ಹೋದ ಪ್ರವಾಸಿಗರಲ್ಲಿ ಭಾರತೀಯರು ಟಾಪ್ ಆಗಿದ್ದರು. 2024ರಲ್ಲಿ ಆರನೇ ಸ್ಥಾನಕ್ಕೆ ಇಳಿದಿದೆ. ಪ್ರವಾಸೋದ್ಯಮವೇ ಪ್ರಮುಖ ಆದಾಯ ಮೂಲವಾಗಿರುವ ಮಾಲ್ಡೀವ್ಸ್ಗೆ ಇದು ಆತಂಕದ ಮತ್ತು ಸವಾಲಿನ ವಿಚಾರವಾಗಿದೆ. ಮಾಲ್ಡೀವ್ಸ್ ಪ್ರವಾಸೋದ್ಯಮ ಸಚಿವಾಲಯ ಬಿಡುಗಡೆ ಮಾಡಿದ ದತ್ತಾಂಶದ ಪ್ರಕಾರ 2023ರಲ್ಲಿ 17 ಲಕ್ಷ ಪ್ರವಾಸಿಗರು ಆ ದೇಶಕ್ಕೆ ಭೇಟಿ ನೀಡಿದ್ದರು.
ಈ ಪೈಕಿ 2.09 ಲಕ್ಷ ಜನರು ಭಾರತೀಯರೇ ಆಗಿದ್ದರು. ರಷ್ಯಾ ಮತ್ತು ಚೀನಾದ ಪ್ರವಾಸಿಗರು ನಂತರದ ಸ್ಥಾನ ಹೊಂದಿದ್ದರು. 2024ರಲ್ಲಿ ಮಾರ್ಚ್ 2ರವರೆಗೂ ದೊರೆತ ಅಂಕಿ ಅಂಶದ ಪ್ರಕಾರ ಮಾಲ್ಡೀವ್ಸ್ಗೆ ಪ್ರವಾಸ ಹೋದ ಭಾರತೀಯರ ಸಂಖ್ಯೆಯಲ್ಲಿ ಶೇ. 33ರಷ್ಟು ಇಳಿಮುಖವಾಗಿದೆ. 2023ರಲ್ಲಿ ಮಾರ್ಚ್ 2ರವರೆಗೆ 41,224 ಭಾರತೀಯರು ಮಾಲ್ಡೀವ್ಸ್ಗೆ ಪ್ರವಾಸ ಹೋಗಿದ್ದರು. ಈ ವರ್ಷ (2024) ಇದೇ ಅವಧಿಯಲ್ಲಿ ಮಾಲ್ಡೀವ್ಸ್ಗೆ ತೆರಳಿದ ಭಾರತೀಯರ ಸಂಖ್ಯೆ 27,224 ಎನ್ನಲಾಗಿದೆ.
ಮಾಲ್ಡೀವ್ಸ್ನಲ್ಲಿ ಬಿಸಿಲ ಬೇಗೆ ಇರುವ ಅವಧಿಯು ಪೀಕ್ ಸೀಸನ್ ಆಗಿರುವುದಿಲ್ಲ. ಈ ಸಂದರ್ಭದಲ್ಲಿ ಯೂರೋಪ್ ಪ್ರವಾಸಿಗರು ಬರುವುದಿಲ್ಲ. ಇಂಥ ಕಾಲಘಟ್ಟದಲ್ಲಿ ಮಾಲ್ಡೀವ್ಸ್ಗೆ ಭಾರತೀಯರು ಹೋಗುತ್ತಾರೆ. ಇದು ಅಲ್ಲಿಯ ಪ್ರವಾಸೋದ್ಯಮಕ್ಕೆ ದೊಡ್ಡ ಬಲ ಸಿಕ್ಕಂತೆ. ಈಗ ಭಾರತದಿಂದ ಮಾಲ್ಡೀವ್ಸ್ಗೆ ಹೋಗುವ ಪ್ರವಾಸಿಗರ ಸಂಖ್ಯೆ ಗಣನೀಯವಾಗಿ ಇಳಿಕೆ ಆಗುತ್ತಿದೆ.