ಪ್ರಕೃತಿಯಲ್ಲಿ ಕೆಲವೊಂದು ನಿಜಕ್ಕೂ ಅಚ್ಚರಿ ಉಂಟುಮಾಡುತ್ತವೆ. ಕೆಲವೊಮ್ಮೆ ವಿಚಿತ್ರವೂ ಎನಿಸುತ್ತದೆ. ಸಾಕಷ್ಟು ಬಾರಿ ಎಂತಹ ಘಟನೆಗಳು ನಡೆದಾಗ ಅದನ್ನು ನಂಬಬೇಕೋ ಬೇಡವೋ ಎಂಬ ಗೊಂದಲ ಶುರುವಾಗುತ್ತದೆ. ಇದೀಗ ಅಂತದ ಅಚ್ಚರಿಯ ಘಟನೆಯೊಂದು ಬ್ರೆಜಿಲ್ ನಲ್ಲಿ ಬೆಳಕಿಗೆ ಬಂದಿದೆ.
81 ವರ್ಷದ ವೃದ್ಧೆಯ ಹೊಟ್ಟೆಯಲ್ಲಿ ಕಲ್ಲಿನ ಮಗುವೊಂದು ಪತ್ತೆಯಾಗಿದೆ. ವೃದ್ಧೆಯು ಕಳೆದ 56 ವರ್ಷಗಳಿಂದ ಮಗುವನ್ನು ತನ್ನ ಹೊಟ್ಟೆಯಲ್ಲಿ ಹೊತ್ತುಕೊಂಡಿದ್ದಳು. ಆದರೆ ಶಸ್ತ್ರಚಿಕಿತ್ಸೆಯ ವೇಳೆ ವೃದ್ಧೆ ಕೊನೆಯುಸಿರೆಳೆದಿದ್ದಾಳೆ.
ಮೂತ್ರನಾಳದ ಸೋಂಕಿನ ಚಿಕಿತ್ಸೆಗಾಗಿ ಡೇನಿಯಲಾ ಎಂಬ ವೃದ್ಧೆ ತನ್ನ ಮನೆಯ ಸಮೀಪವಿರುವ ಆಸ್ಪತ್ರೆಗೆ ತೆರಳಿದ್ದಾಳೆ. ಚಿಕಿತ್ಸೆಯ ಬಳಿಕವು ಆಕೆಗೆ ಹೊಟ್ಟೆ ನೋವು ಕಡಿಮೆಯಾಗದ ಹಿನ್ನೆಲೆಯಲ್ಲಿ ವೈದ್ಯರು ಆಕೆಯನ್ನು ಬೇರೆ ಬೇರೆ ಪರೀಕ್ಷೆಗೆ ಒಳಪಡಿಸಿದ್ದಾರೆ. ಈ ವೇಳೆ ಹೊಟ್ಟೆಯಲ್ಲಿ ಕಲ್ಲಿನಂತಿರುವ ಮಗುವಿರುವುದು ವೈದ್ಯರ ಗಮನಕ್ಕೆ ಬಂದಿದೆ.
ಏಳು ಮಕ್ಕಳ ತಾಯಿ 1968 ರಲ್ಲಿ ಕೊನೆಯ ಬಾರಿಗೆ ಗರ್ಭಿಣಿಯಾಗಿದ್ದರು. ಕಳೆದ 56 ವರ್ಷಗಳಿಂದ ಆಕೆಯ ದೇಹದಲ್ಲಿತ್ತು ಎಂದು ತಿಳಿದು ಬಂದಿದೆ. ಆ ಬಳಿಕ ವೃದ್ಧೆಯ ಹೊಟ್ಟೆಯಲ್ಲಿ ಕಲ್ಲಿನ ಮಗುವನ್ನು ಹೊರತೆಗೆಯಲು ಶಸ್ತ್ರಚಿಕಿತ್ಸೆಗೆ ಒಳಪಡಿಸಲಾಗಿದೆ. ಶಸ್ತ್ರಚಿಕಿತ್ಸೆಯ ಮರುದಿನ ವೃದ್ಧೆಯು ಐಸಿಯುನಲ್ಲಿ ಕೊನೆಯುಸಿರೆಳೆದಿದ್ದಾಳೆ. ವೃದ್ಧೆಯ ಗರ್ಭದಲ್ಲಿ ಹೊರ ತೆಗೆದ ಈ ಅಪರೂಪದ ‘ಕಲ್ಲಿನ ಶಿಶು’ವನ್ನು ಪರೀಕ್ಷೆಗೆ ಕಳುಹಿಸಲಾಗಿದೆ.
ಲಿಥೊಪೆಡಿಯನ್ ಅಥವಾ ಸ್ಟೋನ್ ಬೇಬಿ ಎಂದರೆ ಶರೀರಕ್ಕೆ ದೊಡ್ಡ ಗಾತ್ರದ ಮೃತ ಭ್ರೂಣವನ್ನು ಹೊರಹಾಕಲು ಸಾಧ್ಯವಾಗದೇ ಇದ್ದಾಗ ಸ್ವಾಭಾವಿಕವಾಗಿ ಅದರ ಮೃತ ಕೋಶಗಳ ಸುತ್ತ ಕ್ಯಾಲ್ಸಿಯಮ್ ಲೇಪನ ಸೃಷ್ಟಿಯಾಗಲು ಪ್ರಾರಂಭಿಸುತ್ತದೆ. ಕ್ರಮೇಣ ಆ ಮಗು ಕ್ಯಾಲ್ಸಿಫೈಡ್ ಆಗಿ ಕಲ್ಲಾಗಿ ಮಾರ್ಪಡಾಗುತ್ತದೆ. ಈ ವೈದ್ಯಕೀಯ ಸ್ಥಿತಿಯನ್ನು ಲಿಥೊಪೆಡಿಯನ್ ಅಥವಾ ಸ್ಟೋನ್ ಬೇಬಿ ಎಂದು ಕರೆಯುತ್ತಾರೆ. ಇದು ತುಂಬಾ ಅಪರೂಪ ಸಮಸ್ಯೆಯಾಗಿದ್ದು, ವಿಶ್ವಾದ್ಯಂತ ವೈದ್ಯಕೀಯ ಇತಿಹಾಸದಲ್ಲಿ ಇಂತಹ 300 ಘಟನೆಗಳು ಮಾತ್ರ ಕಂಡುಬಂದಿವೆ. ಮಗುವಿನ ಕ್ಯಾಲ್ಸಿಫಿಕೇಶನ್ ಕಾರಣದಿಂದಾಗಿ ತಾಯಿಗೆ ಯಾವುದೆ ಇನ್ ಫೆಕ್ಷನ್ ಆಗಿರಲಿಲ್ಲ.