ಬೆಂಗಳೂರು: SSLC ಎಕ್ಸಾಂ ಬರೆಯುವ ವಿದ್ಯಾರ್ಥಿಗಳಿಗೆ ರಾಜ್ಯಸರ್ಕಾರ ಗುಡ್ ನ್ಯೂಸ್ ಕೊಟ್ಟಿದೆ. ಹೌದು, 2023-24ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಎಸ್ಎಸ್ ಎಲ್ ಸಿ ಪರೀಕ್ಷೆಗೆ ಹಾಜರಾಗುತ್ತಿರುವ ವಿದ್ಯಾರ್ಥಿಗಳಿಗೆ, ಪರೀಕ್ಷಾ ಕೇಂದ್ರಗಳಲ್ಲಿ ಬಿಸಿಯೂಟದ ವ್ಯವಸ್ಥೆಯನ್ನು ಶಿಕ್ಷಣ ಇಲಾಖೆ ಮಾಡಿದೆ.
ಈ ಕುರಿತಂತೆ ಶಾಲಾ ಶಿಕ್ಷಣ ಇಲಾಖೆಯಿಂದ ಸುತ್ತೋಲೆ ಹೊರಡಿಸಲಾಗಿದ್ದು,2023-24ನೇ ಸಾಲಿನ 29 ಮೇ 2023 ರಿಂದ 10 ಏಪ್ರಿಲ್ 2024 ರವರೆಗಿನ ಶೈಕ್ಷಣಿಕ ವರ್ಷದ ಅವಧಿಯಲ್ಲಿ 1-10ನೇ ತರಗತಿ ವಿದ್ಯಾರ್ಥಿಗಳಿಗೆ ಎಂ ಪೋಷಣ್(ಮಧ್ಯಾಹ್ನ ಉಪಾಹಾರ ಯೋಜನೆ) ಅನುಷ್ಠಾನಗೊಂಡಿರುತ್ತದೆ ಎಂದಿದ್ದಾರೆ.
ಸದರಿ ವಾರ್ಷಿಕ ಕಾರ್ಯಕ್ರಮದಡಿ ಅಡುಗೆ ಕೇಂದ್ರಗಳಿರುವ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಉಲ್ಲೇಖ – 1 ರ ಆದೇಶದಲ್ಲಿರುವಂತೆ ಪಬ್ಲಿಕ್ ಪರೀಕ್ಷೆಗಳು ದಿನಾಂಕ F 25.03.2024 ರಿಂದ ಪ್ರಾರಂಭಗೊಂಡು ದಿನಾಂಕ: 06.04.2024ರವರೆಗೆ ನಡೆಯಲಿದ್ದು ಈ ದಿನಾಂಕಗಳಂದು ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷಾ ಕಾರ್ಯಕ್ಕೆ ಯಾವುದೇ ಅಡಚಣೆಯಾಗದಂತೆ ವಾರ್ಷಿಕ ಪಬ್ಲಿಕ್ ಪರೀಕ್ಷೆ ಬರೆಯುವ ಎಲ್ಲಾ ವಿದ್ಯಾರ್ಥಿಗಳಿಗೆ ಮಧ್ಯಾಹ್ನ ಬಿಸಿಯೂಟವನ್ನು ಸಿದ್ಧಪಡಿಸಿ ವಿತರಿಸುವಂತೆ ಆದೇಶಿಸಿದೆ .
ಈ ಬಗ್ಗೆ ಪರೀಕ್ಷಾ ಕೇಂದ್ರದ ಶಾಲಾ ಮುಖ್ಯಸ್ಥರಿಗೆ ಹಾಗೂ ಪರೀಕ್ಷಾ ಕಾರ್ಯಕ್ರಮದ ಅನುಷ್ಠಾನಾಧಿಕಾರಿ ಮತ್ತು ಮೇಲ್ವಿಚಾರಕ ಸಿಬ್ಬಂದಿಗಳಿಗೆ ಈ ಕಳಕಂಡ ಮಾರ್ಗಸೂಚಿಯನ್ನು ಅನುಸರಿಸುವಂತೆ ಸೂಚಿಸಿದೆ.
ಅಡುಗೆ ಕೇಂದ್ರಗಳಿರುವ SSLC ಪರೀಕ್ಷಾ ಕೇಂದ್ರಗಳಲ್ಲಿ 1167-ಸರ್ಕಾರಿ ಮತ್ತು 884- ಅನುದಾನಿತ ಶಾಲೆಗಳ ಮಧ್ಯಾಹ್ನ ಬಿಸಿಯೂಟ ಸ್ವೀಕರಿಸಲು ಅಪೇಕ್ಷಿಸಿರುವ ಹಾಗೂ ಪರೀಕ್ಷೆಗೆ ಹಾಜರಾಗುವ ಎಲ್ಲಾ ವಿದ್ಯಾರ್ಥಿಗಳಿಗೆ ಅವರ ಹಾಜರಾತಿ ಸಂಖ್ಯೆಗೆ ಅನುಗುಣವಾಗಿ ಬಿಸಿಯೂಟ ಸಿದ್ಧಪಡಿಸಿ ವಿತರಿಸುವಂತೆ ಸೂಚಿಸಿದೆ.
ಏಪ್ರಿಲ್ 10 ರ ವರೆಗೆ ಎಲ್ಲಾ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ಅಡುಗೆ ಕೇಂದ್ರಗಳಲ್ಲಿ ಪರೀಕ್ಷೆಗಳು ನಡೆಯುವ ಸಂದರ್ಭದಲ್ಲಿಯೂ ಸಹ 1-10ನೇ ತರಗತಿಯವರೆಗೆ ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟವನ್ನು ತಪ್ಪದೇ ಪೂರೈಸುವುದು.
ಶಾಲಾ ಮಕ್ಕಳಿಗೆ ಶುದ್ಧ ಕುಡಿಯುವ ನೀರು ಒದಗಿಸುವುದರೊಂದಿಗೆ,ಸುರಕ್ಷಿತವಾಗಿ ಶುಚಿ-ರುಚಿಯಾಗಿ ಬಿಸಿಯೂಟವನ್ನು ಸಿದ್ಧಪಡಿಸಿ ವಿತರಿಸುವುದು ಹಾಗೂ ಶಾಲಾ ಮಕ್ಕಳ ಸುರಕ್ಷತೆ ಮತ್ತು ಆರೋಗ್ಯ, ಬಿಸಿಯೂಟ ಆಹಾರದ ಉತ್ತಮ ಗುಣಮಟ್ಟ, ಸ್ವಚ್ಛತೆ ಮತ್ತು ನೈರ್ಮಲ್ಯ ಈ ಅಂಶಗಳಿಗೆ ಶಾಲಾ ಮುಖ್ಯಸ್ಥರು, ನಿರ್ವಾಹಕರು ಹಾಗೂ ಅಡುಗೆ ಸಿಬ್ಬಂದಿಯವರು ಪಥಮ ಆದ್ಯತೆ ನೀಡಿ ಯಾವುದೇ ತೊಂದರೆಯಾಗದಂತೆ ಎಚ್ಚರವಹಿಸುವುದು.