ನವದೆಹಲಿ: ರಷ್ಯಾ ರಾಜಧಾನಿ ಮಾಸ್ಕೋದ ಕ್ರೋಕಸ್ ಕನ್ಸರ್ಟ್ ಹಾಲ್ನಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು ಪ್ರಧಾನಿ ನರೇಂದ್ರ ಮೋದಿ ಖಂಡಿಸಿದ್ದಾರೆ. ಈ ಸಂಬಂಧ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿರುವ ಪ್ರಧಾನಿ, ಮಾಸ್ಕೋದಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿಯನ್ನು ಬಲವಾಗಿ ಖಂಡಿಸುತ್ತೇವೆ. ಸಂತ್ರಸ್ತ ಕುಟುಂಬಗಳಿಗೆ ದುಃಖ ಭರಿಸುವ ಶಕ್ತಿಯನ್ನು ಭಗವಂತ ನೀಡಲಿ. ಈ ದುಃಖದ ಸಮಯದಲ್ಲಿ ಭಾರತವು ರಷ್ಯಾದ ಒಕ್ಕೂಟದ ಸರ್ಕಾರ ಮತ್ತು ಜನರೊಂದಿಗೆ ಒಗ್ಗಟ್ಟಿನಿಂದ ನಿಂತಿದೆ ಎಂದು ಹೇಳಿದ್ದಾರೆ.
ಇತ್ತ ದಾಳಿಗೆ ಸಂಬಂಧಪಟ್ಟಂತೆ ರಷ್ಯಾ ಅಧ್ಯಕ್ಷ ಪುಟಿನ್, ದಾಳಿಕೋರರು ತಕ್ಕ ಬೆಲೆ ತೆರಬೇಕಾಗುತ್ತದೆ. ಭಯೋತ್ಪಾದಕರನ್ನು ನಾವು ಸುಮ್ಮನೆ ಬಿಡಲ್ಲ ಎಂದು ದಾಳಿಯ ಹೊಣೆ ಹೊತ್ತ ಐಸಿಸ್ಗೆ ಎಚ್ಚರಿಕೆ ನೀಡಿದ್ದಾರೆ. ಶುಕ್ರವಾರ ಮಧ್ಯರಾತ್ರಿ ಸಂಗೀತ ಕಾರ್ಯಕ್ರಮ ನಡೆಯುತ್ತಿದ್ದ ಸಂದರ್ಭದಲ್ಲಿ ನಡೆದ ಈ ಭೀಕರ ಭಯೋತ್ಪಾದಕ ದಾಳಿಯಲ್ಲಿ ಈವರೆಗೆ ಕನಿಷ್ಠ 70 ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ ಮತ್ತು 140 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಕೃತ್ಯದ ಬಳಿಕ ಮಾಸ್ಕೋದ ಹೊರವಲಯದಲ್ಲಿರುವ ಕ್ರೋಕಸ್ ಕನ್ಸರ್ಟ್ ಹಾಲ್ ಮೇಲೆ ನಮ್ಮ ಯೋಧರು ದಾಳಿ ನಡೆಸಿದ್ದಾರೆ. ಸದ್ಯ ದಾಳಿಕೋರರು ಸುರಕ್ಷಿತವಾಗಿದ್ದು, ವಾಪಸ್ಸಾಗಿದ್ದಾರೆ ಎಂದು ಐಸಿಸ್ ತನ್ನ ಟೆಲಿಗ್ರಾಮ್ ನಲ್ಲಿ ಹೇಳಿಕೆ ನೀಡಿದೆ.
ಉಗ್ರರ ಫೋಟೋ ಬಿಡುಗಡೆ: ಘಟನೆಯ ಬಳಿಕ ರಷ್ಯಾದ ಮಾಧ್ಯಮಗಳು ಭಯೋತ್ಪಾದಕರ ಫೋಟೋಗಳನ್ನು ಬಿಡುಗಡೆ ಮಾಡಿವೆ. ಉಗ್ರರ ದಾಳಿಯ ವೇಳೆ ಸ್ಥಳದಲ್ಲಿ ಇದ್ದ ಪ್ರತ್ಯಕ್ಷದರ್ಶಿಗಳ ಹೇಳಿಕೆಗಳನ್ನು ಉಲ್ಲೇಖಿಸಿ ಸ್ಥಳೀಯ ಮಾಧ್ಯಮ ವರದಿಗಳು, ದಾಳಿಕೋರರು ‘ಏಷ್ಯನ್ ಮತ್ತು ಕಕೇಶಿಯನ್’ ಜನರಂತೆ ಕಾಣುತ್ತಿದ್ದರು ಮತ್ತು ವಿದೇಶಿ ಭಾಷೆಯಲ್ಲಿ ಮಾತನಾಡುತ್ತಿದ್ದರು, ರಷ್ಯನ್ ಅಲ್ಲ. ಭಯೋತ್ಪಾದಕರು ಇಂಗುಶೆಟಿಯಾ ಸ್ಥಳೀಯರು ಎಂಬುದಾಗಿ ವರದಿ ಮಾಡಿವೆ.