ನವದೆಹಲಿ: ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರನ್ನು ಏಳು ದಿನಗಳ ಕಾಲ (ಮಾರ್ಚ್ 28 ವರೆಗೆ) ಜಾರಿ ನಿರ್ದೇಶನಾಲಯದ (ED) ವಶಕ್ಕೆ ನೀಡಲಾಗಿದೆ. ತಮ್ಮ ಬಂಧನ ಪ್ರಶ್ನಿಸಿ ಸುಪ್ರೀಂ ಕೋರ್ಟ್ಗೆ ಸಲ್ಲಿಸಿದ್ದ ಅರ್ಜಿಯನ್ನು ಅರವಿಂದ್ ಕೇಜ್ರಿವಾಲ್ ಹಿಂಪಡೆದಿದ್ದರು. ಅದಾದ ಬಳಿಕ ದೆಹಲಿಯ ರೂಸ್ ಅವೆನ್ಯೂ ಕೋರ್ಟ್, ಇ.ಡಿ ವಶಕ್ಕೆ ವಹಿಸಿ ಆದೇಶ ಹೊರಡಿಸಿದೆ. ಕೇಜ್ರಿವಾಲ್ ಅವರನ್ನು 10 ದಿನಗಳ ಕಾಲ ಕಸ್ಟಡಿಗೆ ನೀಡುವಂತೆ ಕೇಂದ್ರೀಯ ಸಂಸ್ಥೆ ಕೋರಿತ್ತು.
ತನ್ನ ತನಿಖೆಯನ್ನು ಪೂರ್ಣಗೊಳಿಸಲು ಮತ್ತು ಆಮ್ ಆದ್ಮಿ ಪಕ್ಷದ ನಾಯಕನನ್ನು ಪ್ರಕರಣದಲ್ಲಿ ಬಂಧಿತ ಆರೋಪಿಗಳೊಂದಿಗೆ ವಿಚಾರಣೆಗೆ ಸಮಯ ಬೇಕಾಗುತ್ತದೆ ಎಂದು ಹೇಳಿತ್ತು. ಶುಕ್ರವಾರದ ವಿಚಾರಣೆಯಲ್ಲಿ, ಅರವಿಂದ್ ಕೇಜ್ರಿವಾಲ್ ಅವರನ್ನು ಪ್ರಕರಣದ ಕಿಂಗ್ಪಿನ್ ಎಂದು ಇ.ಡಿ ಕರೆದಿದೆ. ಆಪಾದಿತ ಹಗರಣದ ಒಟ್ಟು ಆದಾಯವು 600 ಕೋಟಿ ಮೀರಿದೆ. ಇದರಲ್ಲಿ ‘ಸೌತ್ ಗ್ರೂಪ್’ ಪಾವತಿಸಿದ 100 ಕೋಟಿಯೂ ಸೇರಿದೆ ಎಂದು ಇ.ಡಿ ತಿಳಿಸಿದೆ.