ನವದೆಹಲಿ: ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯವು (DGCA) ಏರ್ ಇಂಡಿಯಾಗೆ (Air India) 80 ಲಕ್ಷ ರೂ. ದಂಡ ವಿಧಿಸಿದೆ. ವಿಮಾನದ ಕರ್ತವ್ಯದ ಸಮಯದ ಮಿತಿಗಳು ಮತ್ತು ವಿಮಾನ ಸಿಬ್ಬಂದಿಯ ಆಯಾಸ ನಿರ್ವಹಣೆ ವ್ಯವಸ್ಥೆಗೆ ಸಂಬಂಧಿಸಿದ ನಿಯಮಾವಳಿಗಳನ್ನು ಉಲ್ಲಂಘಿಸಿದ್ದಕ್ಕಾಗಿ ದಂಡ ಹಾಕಿದೆ.
ವಿಮಾನದ ಕರ್ತವ್ಯ ಸಮಯದ ಮಿತಿಗಳು (ಎಫ್ಡಿಟಿಎಲ್) ಮತ್ತು ವಿಮಾನ ಸಿಬ್ಬಂದಿಯ ಆಯಾಸ ನಿರ್ವಹಣಾ ವ್ಯವಸ್ಥೆ (ಎಫ್ಎಂಎಸ್)ಗೆ ಸಂಬಂಧಿಸಿದ ನಿಯಮಗಳ ಉಲ್ಲಂಘನೆಗಾಗಿ ದಂಡ ವಿಧಿಸಲಾಗಿದೆ ಎಂದು ವಿಮಾನಯಾನ ನಿಯಂತ್ರಕ ಹೇಳಿಕೆಯಲ್ಲಿ ತಿಳಿಸಿದೆ.
ಡಿಜಿಸಿಎ ಈ ವರ್ಷದ ಜನವರಿ ತಿಂಗಳಲ್ಲಿ ಏರ್ ಇಂಡಿಯಾ ಲಿಮಿಟೆಡ್ನ ಸ್ಪಾಟ್ ಆಡಿಟ್ ಅನ್ನು ನಡೆಸಿತ್ತು. ಡಿಜಿಸಿಎ ಆಡಿಟ್ ಸಮಯದಲ್ಲಿ ಸಾಕ್ಷ್ಯವನ್ನು ಸಂಗ್ರಹಿಸಿತ್ತು. ವಾಯುಯಾನದಲ್ಲಿ ಉನ್ನತ ಮಟ್ಟದ ಸುರಕ್ಷತೆಯನ್ನು ಖಾತ್ರಿಪಡಿಸುವ ಪೂರ್ವಭಾವಿ ಹೆಜ್ಜೆಯಾಗಿ, ಎಫ್ಡಿಟಿಎಲ್ ಮತ್ತು ಎಫ್ಎಂಎಸ್ ನಿಯಮಗಳಿಗೆ ಸಂಬಂಧಿಸಿದಂತೆ ಆಪರೇಟರ್ನ ನಿಯಂತ್ರಕ ಅನುಸರಣೆಯನ್ನು ಪರಿಶೀಲಿಸಿತ್ತು. ನಿಯಮ ಉಲ್ಲಂಘಿಸಿರುವುದು ಸ್ಪಾಟ್ ಆಡಿಟ್ನಿಂದ ತಿಳಿದುಬಂದಿದೆ.
ವರದಿಗಳ ವಿಶ್ಲೇಷಣೆಯು, M/s ಏರ್ ಇಂಡಿಯಾ ಲಿಮಿಟೆಡ್ 60 ವರ್ಷಕ್ಕಿಂತ ಮೇಲ್ಪಟ್ಟ ಎರಡೂ ವಿಮಾನ ಸಿಬ್ಬಂದಿಯೊಂದಿಗೆ ಕೆಲವು ನಿದರ್ಶನಗಳಲ್ಲಿ ಒಟ್ಟಿಗೆ ಹಾರಾಟ ನಡೆಸುತ್ತಿದೆ ಎಂದು ಬಹಿರಂಗಪಡಿಸಿತು. ಇದು ನಿಯಮ 28 A ನ ಉಪ ನಿಯಮ (2) ರ ಉಲ್ಲಂಘನೆಯಾಗಿದೆ ಎಂದು ಡಿಜಿಸಿಎ ತಿಳಿಸಿದೆ. ಭಾರತದಲ್ಲಿ ನಾಗರಿಕ ವಿಮಾನಯಾನ ಕ್ಷೇತ್ರದಲ್ಲಿ ಉನ್ನತ ಮಟ್ಟದ ಸುರಕ್ಷತೆಯನ್ನು ನಿರ್ವಹಿಸಲು DGCA ಬದ್ಧವಾಗಿದೆ. ಈ ಜಾರಿ ಕ್ರಮವು ಅದರ ಬದ್ಧತೆಗೆ ಅನುಗುಣವಾಗಿದೆ ಎಂದು ಹೇಳಿದೆ.