ಬೆಂಗಳೂರು: ಲೋಕಸಭೆ ಚುನಾವಣೆಗೆ (Lok Sabha Election 2024) ಅಖಾಡ ಸಿದ್ಧವಾಗಿದೆ. 2023ರ ವಿಧಾನಸಭಾ ಚುನಾವಣೆಯಲ್ಲಿ 135 ಸ್ಥಾನಗಳನ್ನು ಗೆಲ್ಲುವ ಮೂಲಕ ರಾಜ್ಯದಲ್ಲಿ ಆಡಳಿತದ ಚುಕ್ಕಾಣಿ ಹಿಡಿದಿರುವ ಕಾಂಗ್ರೆಸ್ (Congress) ಲೋಕಸಭೆಗೆ ಸಿದ್ಧತೆ ಮಾಡಿಕೊಳ್ತಿದೆ. ಈ ಬಾರಿ ಬಿಜೆಪಿ-ಜೆಡಿಎಸ್ ಮೈತ್ರಿಯಾಗಿ ಸಾರ್ವತ್ರಿಕ ಚುನಾವಣೆ ಅಖಾಡಕ್ಕಿಳಿದಿರುವುದು ಕುತೂಹಲ ಮೂಡಿಸಿದೆ.
2019ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯ ಸೋಲನುಭವಿಸಿತ್ತು. ರಾಜ್ಯದ 28 ಲೋಕಸಭಾ ಕ್ಷೇತ್ರಗಳಲ್ಲಿ ‘ಕೈ’ ಹಿಡಿದಿದ್ದು ಬೆಂಗಳೂರು ಗ್ರಾಮಾಂತರ ಏಕೈಕ ಕ್ಷೇತ್ರ ಮಾತ್ರ. ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಡಿ.ಕೆ.ಸುರೇಶ್ (D.K.Suresh) ಗೆಲುವು ಸಾಧಿಸಿ ಪಾರ್ಲಿಮೆಂಟ್ ಪ್ರವೇಶಿಸಿದ್ದರು. ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರದಿಂದ 3 ಬಾರಿ ಡಿ.ಕೆ.ಸುರೇಶ್ ಆಯ್ಕೆಯಾಗಿದ್ದಾರೆ. ಡಿಕೆ ಬ್ರದರ್ಸ್ ಭದ್ರಕೋಟೆಯನ್ನು ಹೇಗಾದರು ಮಾಡಿ ಭೇದಿಸಬೇಕು ಎಂದು ಬಿಜೆಪಿ-ಜೆಡಿಎಸ್ ಮೈತ್ರಿ ಪಣ ತೊಟ್ಟಂತಿದೆ. ಹೀಗಾಗಿ ವೈದ್ಯಕೀಯ ಕ್ಷೇತ್ರದಲ್ಲಿ ಖ್ಯಾತಿ ಗಳಿಸಿರುವ ಡಾ. ಸಿ.ಎನ್.ಮಂಜುನಾಥ್ (Dr. C.N.Manjunath) ಅವರನ್ನು ಮೈತ್ರಿ ಪಕ್ಷಗಳು ಕಣಕ್ಕಿಳಿಸಿದೆ
ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರವು 8 ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿದೆ. ಕುಣಿಗಲ್, ರಾಜರಾಜೇಶ್ವರಿನಗರ, ಆನೇಕಲ್, ಮಾಗಡಿ, ರಾಮನಗರ, ಕನಕಪುರ, ಚನ್ನಪಟ್ಟಣ ಕ್ಷೇತ್ರಗಳು ಇದರ ವ್ಯಾಪ್ತಿಗೆ ಒಳಪಡುತ್ತವೆ.
2019 ರಲ್ಲಿ ನಡೆದ ಚುನಾವಣೆಯಲ್ಲಿ ಈ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಡಿ.ಕೆ.ಸುರೇಶ್ ಗೆಲುವು ದಾಖಲಿಸಿ ಹ್ಯಾಟ್ರಿಕ್ ಸಾಧನೆ ಮಾಡಿದ್ದರು. ಈ ಅವಧಿಯಲ್ಲಿ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರವು ರಾಜ್ಯದಲ್ಲಿ ಚುನಾವಣೆ ಎದುಸಿದ್ದವು. ಡಿ.ಕೆ.ಸುರೇಶ್ 2,06,870 ಮತಗಳ ಅಂತರದಿಂದ ಜಯಗಳಿಸಿದ್ದರು. ಇವರ ವಿರುದ್ಧ ಬಿಜೆಪಿಯಿಂದ ಅಶ್ವಥ್ ನಾರಾಯಣಗೌಡ ಸ್ಪರ್ಧಿಸಿ ಪರಾಭವಗೊಂಡಿದ್ದರು.