ಕೋಲ್ಕತ್ತಾ: ತೈಮೂರ್, ಬಾಬರ್ನಂತಹ ರಾಜರು ನಮ್ಮ ದೇಶವನ್ನು ಆಳಯವಾಗ ಇಲ್ಲಿ ಹಿಂದೂಗಳೇ (Hindu) ಇರಲಿಲ್ಲ ಎಂದು ಟಿಎಂಸಿಯ (TMC) ಹೌರ ಕ್ಷೇತ್ರದ ಅಭ್ಯರ್ಥಿ, ಹಾಲಿ ಸಂಸದ ಪ್ರಸೂನ್ ಬ್ಯಾನರ್ಜಿ (Prasun Banerjee) ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಚುನಾವಣಾ ಪ್ರಚಾರ ಭಾಷಣದಲ್ಲಿ ಮಾತನಾಡಿದ ಅವರು, ಈ ತಥಾಕಥಿತ ಹಿಂದೂಗಳು ಎಂದರೇ ಯಾರು? ಮುಸ್ಲಿಮರು 800 ವರ್ಷಗಳ ಹಿಂದೆಯೇ ಬಂದಿದ್ದರು. ಆಗ ಭಾರತದಲ್ಲಿ ಹಿಂದೂಗಳೇ ಇರಲಿಲ್ಲ. ಹಿಂದುತ್ವ ಎನ್ನುವುದು 300-400 ವರ್ಷಗಳ ಹಿಂದೆ ಉಗಮವಾಗಿದೆ ಎಂದು ಹೇಳಿದರು.
ಈ ಹೇಳಿಕೆಗೆ ಬಿಜೆಪಿ ಕಿಡಿಕಾರಿದ್ದು, ಪ್ರಸೂನ್ ಬ್ಯಾನರ್ಜಿ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ಈ ಹೇಳಿಕೆ ಭಾರತದ ಇತಿಹಾಸಕ್ಕೆ ಮಾಡಿದ ಅವಮಾನ. ಎರಡು ಕೋಮುಗಳ ಮಧ್ಯೆ ದ್ವೇಷ ಕಿಡಿ ಹಬ್ಬಿಸುವ ಈ ಹೇಳಿಕೆ ನೀಡಿದ್ದಾರೆ ಎಂದು ಬಿಜೆಪಿ ಕಿಡಿಕಾರಿದೆ.
2013ರ ಉಪಚುನಾವಣೆಯ ಗೆಲುವಿನೊಂದಿಗೆ ಪ್ರಸೂನ್ ಬ್ಯಾನರ್ಜಿ 2014, 2019 ಲೋಕಸಭಾ ಚುನಾವಣೆಯಲ್ಲಿ ಗೆದ್ದಿದ್ದಾರೆ. 2019ರ ಚುನಾವಣೆಯಲ್ಲಿ ಬ್ಯಾನರ್ಜಿ 1,03,695 ಮತಗಳ ಅಂತರದಿಂದ ಗೆದ್ದಿದ್ದರು. ಪ್ರಸೂನ್ ಬ್ಯಾನರ್ಜಿಗೆ 5,76,711 ಮತಗಳು ಬಿದ್ದಿದ್ದರೆ ಬಿಜೆಪಿಯ ರಂತಿದೇವ್ ಅವರಿಗೆ 4,73,016 ಮತಗಳು ಬಿದ್ದಿದ್ದವು.