ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಚಂದ್ರಯಾನ-3 )ಮಿಷನ್ನ ವಿಕ್ರಂ ಲ್ಯಾಂಡರ್ ಚಂದ್ರನ ಮೇಲೆ ಸ್ಪರ್ಶಿಸಿದ ಸ್ಥಳಕ್ಕೆ ‘ಶಿವ ಶಕ್ತಿ’ ಎಂದು ಹೆಸರಿಡಲು ಅಂತಾರಾಷ್ಟ್ರೀಯ ಖಗೋಳ ಒಕ್ಕೂಟ ಅನುಮೋದನೆ ನೀಡಿದೆ. ಇದೀಗ ವಿಕ್ರಮ್ ಲ್ಯಾಂಡರ್ ಇಳಿದ ಸ್ಥಳವನ್ನು ಅಧಿಕೃತವಾಗಿ ‘ಶಿವ ಶಕ್ತಿ’ ಎಂದು ಹೆಸರಿಸಲಾಗಿದೆ.
ಚಂದ್ರನ ಮೇಲ್ಮೈಯಲ್ಲಿ ವಿಕ್ರಂ ಲ್ಯಾಂಡರ್ ಇಳಿದ ಸ್ಥಳವನ್ನು ‘ಶಿವ ಶಕ್ತಿ’ ಎಂಬ ಹೆಸರಿನಿಂದ ಪ್ರಧಾನಿ ನರೇಂದ್ರ ಮೋದಿ ಕರೆದಿದ್ದರು. ಇದಾದ 7 ತಿಂಗಳ ಬಳಿಕ ಈ ಸ್ಥಳಕ್ಕೆ ಅಧಿಕೃತವಾಗಿ ‘ಶಿವ ಶಕ್ತಿ’ ಎಂದು ಹೆಸರಿಡಲು ಐಎಯು ಅನುಮೋದನೆ ನೀಡಿದೆ.
ಚಂದ್ರಯಾನ-3 ಲ್ಯಾಂಡಿಂಗ್ ಸೈಟ್ಗೆ ‘ಸ್ಪ್ಯಾಟಿಯೋ ಶಿವ ಶಕ್ತಿ’ ಎಂಬ ಹೆಸರನ್ನಿರಿಸುವಂತೆ ಪ್ಯಾರಿಸ್ ಮೂಲದ ಐಎಯು ಮಾರ್ಚ್ 19 ರಂದು ಅನುಮೋದನೆ ನೀಡಿದೆ. ಗ್ಯಾಜೆಟಿಯರ್ ಆಫ್ ಪ್ಲಾನೆಟರಿ ನಾಮಕರಣದ ಪ್ರಕಾರ ಖಗೋಳ ಸಂಸ್ಥೆಯು ಅನುಮೋದಿಸಿದ ಗ್ರಹಗಳ ಹೆಸರುಗಳ ಬಗ್ಗೆ ವಿವರವಾದ ಮಾಹಿತಿಯನ್ನು ಒದಗಿಸುತ್ತದೆ.
ಆಗಸ್ಟ್ 26, 2023ರಂದು ಬೆಂಗಳೂರಿನ ಇಸ್ರೋ ಟೆಲಿಮೆಟ್ರಿ ಟ್ರ್ಯಾಕಿಂಗ್ ಮತ್ತು ಕಮಾಂಡ್ ನೆಟ್ವರ್ಕ್ ಮಿಷನ್ ಕಂಟ್ರೋಲ್ ಕಾಂಪ್ಲೆಕ್ಸ್ನಲ್ಲಿ ಆಗಸ್ಟ್ 23, ಚಂದ್ರಯಾನ-3 ಚಂದ್ರನ ಮೇಲೆ ಇಳಿದ ದಿನವನ್ನು ‘ರಾಷ್ಟ್ರೀಯ ಬಾಹ್ಯಾಕಾಶ ದಿನ’ ಎಂದು ಕರೆಯಲಾಗುತ್ತದೆ ಎಂದು ಪ್ರಧಾನಿ ಮೋದಿ ಘೋಷಿಸಿದ್ದರು. ಅಲ್ಲದೇ ಚಂದ್ರಯಾನ-2 ತನ್ನ ಹೆಜ್ಜೆಗುರುತುಗಳನ್ನು ಬಿಟ್ಟ ಸ್ಥಳವನ್ನು ‘ತಿರಂಗ’ ಎಂದು ಕರೆಯಲಾಗುವುದು ಎಂದಿದ್ದರು.
ಆಗಸ್ಟ್ 23, 2023ರಂದು ಚಂದ್ರಯಾನ-3 ಮಿಷನ್ ಚಂದ್ರನ ಮೇಲ್ಮೈಯಲ್ಲಿ ಯಶಸ್ವಿ ಸಾಫ್ಟ್ ಲ್ಯಾಂಡಿಂಗ್ ಆಗುವ ಮೂಲಕ ಇತಿಹಾಸವನ್ನು ಸೃಷ್ಟಿಸಿತು. ಭಾರತ ಈಗ ಚಂದ್ರನ ದಕ್ಷಿಣ ಧ್ರುವವನ್ನು ತಲುಪಿದ ಮೊದಲ ರಾಷ್ಟ್ರ ಎಂಬ ಹೆಗ್ಗಳಿಕೆಯನ್ನು ಪಡೆದುಕೊಂಡಿದ್ದು, ಚಂದ್ರನ ಮೇಲೆ ಸಾಫ್ಟ್ ಲ್ಯಾಂಡಿಂಗ್ ಆದ ರಾಷ್ಟ್ರಗಳ ಪೈಕಿ ಭಾರತ ನಾಲ್ಕನೇ ಸ್ಥಾನವನ್ನು ಪಡೆದುಕೊಂಡಿದೆ. ಚಂದ್ರಯಾನ-3 ಮಿಷನ್ನಲ್ಲಿನ ಸಾಧನೆಗಳಿಗಾಗಿ ಇಸ್ರೋಗೆ ಪ್ರತಿಷ್ಠಿತ ‘ಏವಿಯೇಷನ್ ವೀಕ್ ಲಾರೆಟ್ಸ್’ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.