ಗೆದ್ದ ಗಿಲ್.. ಮುಗ್ಗರಿಸಿದ ಪಾಂಡ್ಯ.. ಗುಜರಾತ್ ನಾಯಕತ್ವ ವಹಿಸಿಕೊಂಡ ಶುಭ್ಮನ್ ಗಿಲ್ ಗೆಲುವಿನೊಂದಿಗೆ ಐಪಿಎಲ್ನಲ್ಲಿ ಶುಭಾರಂಭ ಮಾಡಿದರು. ಇತ್ತ, ಗುಜರಾತ್ ಬಿಟ್ಟು ಮುಂಬೈ ನಾಯಕತ್ವ ವಹಿಸಿಕೊಂಡ ಹಾರ್ದಿಕ್ ಪಾಂಡ್ಯ ಸೋಲಿನ ಖಾತೆ ತೆರೆದರು.
ಮುಂಬೈ ಇಂಡಿಯನ್ಸ್ ವಿರುದ್ಧ ಅಹಮದಾಬಾದ್ನಲ್ಲಿ ನಡೆದ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ 6 ರನ್ಗಳ ರೋಚಕ ಗೆಲುವು ಸಾಧಿಸಿತು. ಈ ಮೂಲಕ ಗುಜರಾತ್ ನಾಯಕತ್ವ ತ್ಯಜಿಸಿ ಮುಂಬೈ ನಾಯಕತ್ವ ವಹಿಸಿಕೊಂಡ ಪಾಂಡ್ಯಗೆ ಸೋಲಿನ ಸ್ವಾಗತ ಲಭಿಸಿತು.
ಟಾಸ್ ಸೋತ ಗುಜರಾತ್ ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 168 ರನ್ ಕಲೆಹಾಕಿತು. 169 ರನ್ಗಳ ಗುರಿಯೊಂದಿಗೆ ಕಣಕ್ಕೆ ಇಳಿದ ಮುಂಬೈ 20 ಓವರ್ಗಳಲ್ಲಿ 162 ರನ್ ಗಳಿಸಲಷ್ಟೇ ಶಕ್ತವಾಯಿತು. ಶಿಸ್ತುಬದ್ಧ ಬೌಲಿಂಗ್ ದಾಳಿ ನಡೆಸಿದ ಗುಜರಾತ್ ಗೆಲುವಿನ ನಗೆ ಬೀರಿತು.
ಬ್ಯಾಟಿಂಗ್ನಲ್ಲೂ ಹಾರ್ದಿಕ್ ವೈಫಲ್ಯ
ಮುಂಬೈ ಇಂಡಿಯನ್ಸ್ ಪರ ಇಶಾನ್ ಕಿಶನ್ ಸೊನ್ನೆ ಸುತ್ತಿದರೆ, ರೋಹಿತ್ ಶರ್ಮಾ 43, ಬ್ರೇವಿಸ್ 46, ನಮನ್ 20, ತಿಲಕ್ ವರ್ಮಾ 25 ರನ್ ಗಳಿಸಿದರು. ನಾಯಕ ಹಾರ್ದಿಕ್ ಪಾಂಡ್ಯ ಕೇವಲ 11 ರನ್ ಗಳಿಸಿ ನಿರಾಸೆ ಮೂಡಿಸಿದರು. ಗುಜರಾತ್ ಪರ ಉಮೇಶ್ ಯಾದವ್, ಜಾನ್ಸನ್, ಅಜ್ಮತುಲ್ಲಾ ಒಮರ್ಜಾಯ್ ಹಾಗೂ ಮೋಹಿತ್ ಶರ್ಮಾ ತಲಾ 2 ವಿಕೆಟ್ ಪಡೆದರು. ಸಾಯಿ ಸುದರ್ಶನ್ (45) ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದುಕೊಂಡರು.