ಬೆಂಗಳೂರು; ಕಳೆದ ವರ್ಷ ಡಿಸೆಂಬರ್ 29ರಂದು ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಪ್ರಾಣಾಪಾಯದಿಂದ ಪಾರಾದ ಟೀಮ್ ಇಂಡಿಯಾದ ವಿಕೆಟ್ಕೀಪರ್ ಬ್ಯಾಟ್ಸ್ಮನ್ ರಿಷಭ್ ಪಂತ್, ಸಂಪೂರ್ಣ ಗುಣಮುಖರಾಗಿ ಟೀಮ್ ಇಂಡಿಯಾ ಪರ ಮರಳಿ ಆಡುವಂತ್ತಾಗಲು ಕನಿಷ್ಠ ಎರಡು ವರ್ಷಗಳಾದರೂ ಬೇಕಾಗುತ್ತದೆ ಎಂದು ಬಿಸಿಸಿಐನ ಮಾಜಿ ಅಧ್ಯಕ್ಷ ಸೌರವ್ ಗಂಗೂಲಿ ಹೇಳಿದ್ದಾರೆ. ಪಂತ್ ಅಲಭ್ಯತೆ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಭಾರಿ ಹಿನ್ನಡೆ ತಂದೊಡ್ಡಿದೆ. ಹದಿನಾರನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ದಿಲ್ಲಿ ಫ್ರಾಂಚೈಸಿ ಪರ ಮೆಂಟರ್ ಆಗಿ ಸೇವೆ ಸಲ್ಲಿಸಲಿರುವ ಸೌರವ್, ಈ ಸಂದರ್ಭದಲ್ಲಿ ಪಂತ್ ಸ್ಥತಿಗತಿ ಬಗ್ಗೆ ಬೆಳಕು ಚೆಲ್ಲಿದ್ದಾರೆ. ರಿಷಭ್ ಅಲಭ್ಯತೆ ನಡುವೆ ಆಸ್ಟ್ರೇಲಿಯಾದ ಅನುಭವಿ ಓಪನರ್ ಡೇವಿಡ್ ವಾರ್ನರ್ ತಂಡದ ಸಾರಥ್ಯ ವಹಿಸಿಕೊಂಡಿದ್ದಾರೆ.
ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ ರಿಷಭ್ ಪಂತ್ ಸ್ಥಾನವನ್ನು ತುಂಬಲು ಯಾರಿಂದಲೂ ಸಾಧ್ಯವಿಲ್ಲ ಎಂದು ಸೌರವ್ ಗಂಗೂಲಿ ಹೇಳಿದ್ದಾರೆ. ಅವರ ಜಾಗದಲ್ಲಿ ವಿಕೆಟ್ಕೀಪರ್ ಬ್ಯಾಟ್ಸ್ಮನ್ ಆಗಿ ಆಡುವ 11ರ ಬಳಗ ಸೇರುವವರು ಯಾರು? ಎಂಬುದರ ಬಗ್ಗೆ ದಿಲ್ಲಿ ಫ್ರಾಂಚೈಸಿ ಈವರೆಗೆ ಯಾವುದೇ ಮಾಹಿತಿ ಹಂಚಿಕೊಂಡಿಲ್ಲ.
“ರಿಷಭ್ ಪಂತ್ ಬಳಿಕ ಅಪಘಾತದ ಬಳಿಕ ಒಂದೆರಡು ಬಾರಿ ಮಾತನಾಡಿದ್ದೇನೆ. ಖಂಡಿತವಾಗಿಯೂ ಅವರು ಬಹಳಾ ಕಠಿಣ ಸಮಯವನ್ನು ಎದುರಿಸಿದ್ದಾರೆ. ಗಾಯದ ಸಮಸ್ಯೆಗಳಿಗೆ ಶಸ್ತ್ರಚಿಕಿತ್ಸೆಗಳನ್ನು ತೆಗೆದುಕೊಂಡು ಚೇತರಿಕೆಯ ಹಾದಿಯಲ್ಲಿದ್ದಾರೆ. ಅವರು ಶೀಘ್ರವೇ ಗುಣಮುಖರಾಗಲಿ ಎಂದು ಹಾರೈಸುತ್ತೇನೆ. ಅವರು ಕ್ರಿಕೆಟ್ ಆಡಲು ಒಂದು ವರ್ಷ ಸಮಯವಾದರೂ ಬೇಕು. ಭಾರತ ತಂಡದ ಪರ ಮರಳಿ ಆಡಲು ಎರಡು ವರ್ಷವಾದರೂ ಬೇಕಾಗುತ್ತದೆ,” ಎಂದು ಪಿಟಿಐಗೆ ನೀಡಿರುವ ಸಂದರ್ಶನದಲ್ಲಿ ಗಂಗೂಲಿ ಹೇಳಿದ್ದಾರೆ.
ಡೆಲ್ಲಿ ಕ್ಯಾಪಿಟಲ್ಸ್ ತಂಡ ರಿಷಭ್ ಪಂತ್ಗೆ ಬದಲಿ ಆಟಗಾರನನ್ನು ತೆಗೆದುಕೊಳ್ಳುವುದು ಇನ್ನು ಬಾಕಿಯಿದೆ. ದೇಶಿ ಕ್ರಿಕೆಟ್ನಲ್ಲಿ ಮಿಂಚಿರುವ ಅಭಿಷೇಕ್ ಪೊರೆಲ್ ಅಥವಾ ಅನುಭವಿ ಶೆಲ್ಡನ್ ಜಾಕ್ಸನ್ ಆಯ್ಕೆಯಾಗುವ ಸಾಧ್ಯತೆ ದಟ್ಟವಾಗಿದೆ. “ಈ ಬಗ್ಗೆ ಇನ್ನು ಅಂತಿಮ ನಿರ್ಧಾರಕ್ಕೆ ಬಂದಿಲ್ಲ. ಐಪಿಎಲ್ಗೂ ಮುನ್ನ ತಂಡದ ಅಭ್ಯಾಸ ಶಿಬಿರ ಆರಂಭಿಸುವ ಹೊತ್ತಿಗೆ ಬದಲಿ ಆಟಗಾರನ ನೇಮಕವಾಗಲಿದೆ,” ಎಂದು ಸೌರವ್ ಮಾಹಿತಿ ನೀಡಿದ್ದಾರೆ.
ಅಂದಹಾಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡ ಕೋಲ್ಕತಾದಲ್ಲಿ ಮೂರು ದಿನಗಳ ಅಭ್ಯಾಸ ಶಿಬಿರವನ್ನು ನಡೆಸಿದೆ. ಪೃಥ್ವಿ ಶಾ, ಇಶಾಂತ್ ಶರ್ಮಾ ಮತ್ತು ಚೇತನ್ ಸಕಾರಿಯ, ಮನೀಶ್ ಪಾಂಡೆ ಸೇರಿದಂತೆ ತಂಡದ ಸ್ಟಾರ್ ಆಟಗಾರರು ಶಿಬಿರದಲ್ಲಿ ಪಾಲ್ಗೊಂಡಿದ್ದರು.
“ಐಪಿಎಲ್ 2023 ಟೂರ್ನಿ ಆರಂಭಕ್ಕೆ ಇನ್ನು ಒಂದು ತಿಂಗಳ ಸಮಯವಿದೆ. ಈ ಸಂದರ್ಭದಲ್ಲಿ ಎಲ್ಲಾ ಆಟಗಾರರನ್ನು ಒಟ್ಟಿಗೆ ಸೇರಿಸುವುದು ಸದ್ಯಕ್ಕೆ ಬಹಳಾ ಕಷ್ಟ. ಏಕೆಂದರೆ ಸಾಕಷ್ಟು ಕ್ರಿಕೆಟ್ ಚಟುವಟಿಕೆಗಳು ಇನ್ನು ನಡೆಯುತ್ತಿವೆ. ನಾಲ್ಕೈದು ಆಟಗಾರರು ಇರಾನಿ ಕಪ್ ಆಡುತ್ತಿದ್ದಾರೆ. ಸರ್ಫರಾಝ್ ಖಾನ್ ಕೈಬೆರಳಿನ ಗಾಯದ ಸಮಸ್ಯೆ ಎದುರಿಸಿದ್ದಾರೆ. ಮೂಳೆ ಮುರಿದಿಲ್ಲ ಎಂಬುದಷ್ಟೇ ಸಂತಸದ ಸುದ್ದಿ. ಐಪಿಎಲ್ ಆರಂಭದ ಹೊತ್ತಿಗೆ ಅವರು ಚೇತರಿಸಲಿದ್ದಾರೆ,” ಎಂದು ಸೌರವ್ ಮಾಹಿತಿ ನೀಡಿದ್ದಾರೆ.