ಬೆಂಗಳೂರು:- ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ ಮತದಾನಕ್ಕೆ ಜಾಗೃತಿ ಮೂಡಿಸಲು ಅಧಿಕಾರಿಗಳಿಗೆ ತುಷಾರ್ ಗಿರಿನಾಥ್ ಸೂಚನೆ ನೀಡಿದ್ದಾರೆ.
ಲೋಕಸಭಾ ಚುನಾವಣೆಗೆ ದಿನಗಣನೆ ಅರಂಭವಾಗಿದ್ದು, ಆಯೋಗ ಇದಕ್ಕೆ ಬೇಕಾದ ಸಕಲ ಸಿದ್ದತೆ ಮಾಡಿಕೊಳ್ತಿದೆ. ಚುನಾವಣೆಗೆ ನೇಮಕಗೊಂಡಿರುವ ಬಿಎಲ್ಓ ಹಾಗೂ ಸಿಬ್ಬಂದಿಗಳಿಗೆ ಚುನಾವಣೆ ಪಾಠವನ್ನು ಜಿಲ್ಲಾ ಚುನಾವಣೆ ಅಧಿಕಾರಿ ತುಷಾರ್ ಗಿರಿನಾಥ್ ಮಾಡಿದ್ದು, ಕಳೆದ ಬಾರಿ ನಗರದಲ್ಲಿ ಕೆಲ ಮತಗಟ್ಟೆಗಳಲ್ಲಿ 51% ಕಡಿಮೆ ಮತದಾನ ಹಿನ್ನಲೆ ಅಂತಹ ಮತಗಟ್ಟೆಗಳಲ್ಲಿ ಜಾಗೃತಿ ಮೂಡಿಸುವ ಮೂಲಕ ಹೆಚ್ಚು ಮತದಾನಕ್ಕೆ ಕರೆ ಕೊಟ್ಟಿದ್ದಾರೆ.
ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ 1,897 ಮತಗಟ್ಟೆಗಳ ಪೈಕಿ 935 ಮತಗಟ್ಟೆಗಳಲ್ಲಿ 2019ರಲ್ಲಿ ಮತದಾನ ಪ್ರಮಾಣ ಕಡಿಮೆಯಾಗಿದೆ ಎಂದು ತಿಳಿಸಿದ ಜಿಲ್ಲಾ ಚುನಾವಣಾಧಿಕಾರಿ ತುಷಾರ್ ಗಿರಿನಾಥ್, ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ಶೇಕಡಾವರು ಮತದಾನ ಹೆಚ್ಚಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಮತದಾರರು ತಮ್ಮ ಮತದಾರರ ಗುರುತಿನ ಚೀಟಿ ಸಂಖ್ಯೆಯನ್ನು ನಮೂದಿಸುವ ಮೂಲಕ ಮತಗಟ್ಟೆಗಳು ಮತ್ತು ವಿಳಾಸಗಳ ಕುರಿತು ಹೆಚ್ಚಿನ ಮಾಹಿತಿಗಾಗಿ ಮತದಾರರ ಸಹಾಯವಾಣಿಗೆ ಭೇಟಿ ನೀಡಬಹುದು.ಮತಗಟ್ಟೆಗಳ ಬಗ್ಗೆ ಸಾರ್ವಜನಿಕರಿಗೆ ತಿಳಿಸಲು ಸಾಫ್ಟ್ವೇರ್ ಸಹ ಅಭಿವೃದ್ಧಿಪಡಿಸಲಾಗುತ್ತಿದೆ.
ಇನ್ನೂ ಬೇರೆ ಬೇರೆ ವಲಯಗಳಲ್ಲಿ ಮತಗಟ್ಟೆ ಅಧಿಕಾರಿಗಳಿಗೆ ಚುನಾವಣಾ ಅಧಿಕಾರಿಗಳು ತರಬೇತಿ ನೀಡುತ್ತಿದ್ದಾರೆ. ಮತದಾರರಿಗೆ ಮತದಾನ ಜಾಗೃತಿ ಕಾರ್ಯಾಗಾರ ಜೊತೆಗೆ ಕಡಿಮೆ ಮತದಾನವಾದ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಬೀದಿ ನಾಟಕ ಮೂಲಕ ಮತದಾನ ಜಾಗೃತಿ ಮೂಡಿಸಲು ಜಿಲ್ಲಾ ಚುನಾವಣಾ ಅಧಿಕಾರಿಗಳು ಪ್ಲ್ಯಾನ್ ಮಾಡಿದ್ದಾರೆ. ಈಗಾಗಲೇ ಎಲ್ಲಾ ಸಿಬ್ಬಂದಿಗಳಿಗೆ ಮತದಾನದ ಕಾರ್ಯದ ಬಗ್ಗೆ ಟ್ರೈನಿಂಗ್ ಕೊಡಲಾಗಿದ್ದು, ಸೂಕ್ಷ್ಮ ಹಾಗೂ ಅತಿಸೂಕ್ಷ್ಮ ಮತಗಟ್ಟೆಗಳಲ್ಲಿ ಸಿಸಿ ಕ್ಯಾಮರಾ ಅಳವಡಿಕೆ ಮಾಡಿ ಜಿಲ್ಲಾ ಚುನಾವಣಾಧಿಕಾರಿ ಕಚೇರಿಯಲ್ಲಿ ವೀಕ್ಷಣೆ ಮಾಡಲು ವ್ಯವಸ್ಥೆ ಇದೆ ಹಾಗೂ ಪ್ಯಾರ ಮಿಲಿಟರಿ ನಿಯೋಜನೆ ಮಾಡಲಾಗುತ್ತದೆ.
ಒಟ್ಟಿನಲ್ಲಿ ಮತದಾನ ಹೆಚ್ಚಳಕ್ಕೆ ಚುನಾವಣೆ ಆಯೋಗ ಮುಂದಾಗಿದ್ದು, ಅಧಿಕಾರಿಗಳಿಗೆ ತರಬೇತಿ ನೀಡುವ ಮೂಲಕ ಈ ಬಾರಿ ಪ್ರಜಾಪ್ರಭುತ್ವ ಹಬ್ಬವನ್ನು ಯಾವುದೇ ಅಹಿತಕರ ಘಟನೆಗಳು ಆಗದಂತೆ ಮುಂಜಾಗ್ರತೆಯ ಕ್ರಮ ವಹಿಸಿದೆ ಎನ್ನಲಾಗುತ್ತಿದೆ.