ಬೆಂಗಳೂರು: ನಿಮ್ಮ ಸಿಮ್ ಕಾರ್ಡ್ನಿಂದ ಕಾನೂನುಬಾಹಿರವಾಗಿ ಆಕ್ಷೇಪಾರ್ಹ ಸಂದೇಶಗಳನ್ನು ಪ್ರಕಟಿಸುತಿದ್ದೀರಿ ಎಂದು ಇಬ್ಬರು ಹೈಕೋರ್ಟ್ ನ್ಯಾಯಮೂರ್ತಿಗಳಿಗೆ ಮುಂಬೈ ಪೊಲೀಸರ ಸೋಗಿನಲ್ಲಿ ಬೆದರಿಕೆ ಹಾಕಿದ ವಿಚಾರಕ್ಕೆ ಸಂಬಂಧಿಸಿದಂತೆ ಇದೀಗ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕರೆ ಮಾಡಿದ ಸೈಬರ್ ವಂಚಕರು ನ್ಯಾಯಮೂರ್ತಿಗಳೊಂದಿಗೆ ಏರು ಧ್ವನಿಯಲ್ಲಿ ಮಾತನಾಡಿದ್ದಾರೆ. ನೀವು ಆಕ್ಷೇಪಾರ್ಹ ಸಂದೇಶಗಳನ್ನು ಪ್ರಕಟಿಸುತ್ತಿದ್ದೀರಿ. ನಿಮ್ಮ ವಿರುದ್ಧ ಮುಂಬೈ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಕರೆಯನ್ನು ಪೊಲೀಸರಿಗೆ ವರ್ಗಾವಣೆ ಮಾಡುತ್ತೇನೆ. ಅವರ ಜೊತೆ ಮಾತನಾಡಿ ಇತ್ಯರ್ಥ ಪಡಿಸಿಕೊಳ್ಳಿ ಎಂದಿದ್ದರು. ಅಲ್ಲದೇ ಹಣಕ್ಕೆ ಬೇಡಿಕೆ ಇಟ್ಟಿದ್ದರು.
ಈ ಸಂಬಂಧ ಹೈಕೋರ್ಟ್ ಭದ್ರತಾ ಇನ್ಸ್ಪೆಕ್ಟರ್ಗಳಿಗೆ ನ್ಯಾಯಮೂರ್ತಿಗಳು ದೂರು ನೀಡುವಂತೆ ಸೂಚಿಸಿದ್ದರು. ನ್ಯಾಯಮೂರ್ತಿಗಳ ನಿರ್ದೇಶನದ ಮೇರೆಗೆ ಹೈಕೋರ್ಟ್ ಭದ್ರತಾ ಪೊಲೀಸ್ ಅಧಿಕಾರಿಗಳು ವಿಧಾನಸೌಧ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಇದೀಗ ಈ ಸಂಬಂಧ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.