ಹೈದರಾಬಾದ್: ತೆಲಂಗಾಣ ಇಂಟಲಿಜೆನ್ಸ್ ಬ್ಯೂರೋದ ಮಾಜಿ ಮುಖ್ಯಸ್ಥ ಟಿ.ಪ್ರಭಾಕರ್ ರಾವ್ ಅವರನ್ನು ಫೋನ್ ಕದ್ದಾಲಿಕೆ ಪ್ರಕರಣದಲ್ಲಿಆರೋಪಿ ನಂ.1 ಎಂದು ಹೆಸರಿಸಲಾಗಿದೆ. ಕೆ.ಚಂದ್ರಶೇಖರ ರಾವ್ ನೇತೃತ್ವದ ಹಿಂದಿನ ಬಿಆರ್ಎಸ್ ಸರ್ಕಾರದ ಅವಧಿಯಲ್ಲಿ ಪ್ರತಿಪಕ್ಷ ನಾಯಕರ ಫೋನ್ಗಳನ್ನು ಅಕ್ರಮವಾಗಿ ಟ್ಯಾಪ್ ಮಾಡುವ ಮೂಲಕ ಎಲೆಕ್ಟ್ರಾನಿಕ್ ಡೇಟಾದ ರೀಮ್ಗಳನ್ನು ಸಂಗ್ರಹಿಸಿದ್ದ ಆರೋಪವನ್ನು ಪ್ರಭಾಕರ್ ರಾವ್ ಹೊತ್ತಿದ್ದಾರೆ. ಅವರೀಗ ಅಮೆರಿಕದಲ್ಲಿದ್ದಾರೆ ಎಂದು ವರದಿಯಾಗಿದೆ. ಅವರ ಹೆಸರಿನಲ್ಲಿ ಲುಕ್ ಔಟ್ ನೋಟಿಸ್ ಜಾರಿ ಮಾಡಲಾಗಿದೆ.
ಹೈದರಾಬಾದ್ನಲ್ಲಿರುವ ರಾವ್ ಅವರ ಮನೆ, ‘ಐ ನ್ಯೂಸ್’ ಎಂಬ ತೆಲುಗು ಟಿವಿ ಚಾನೆಲ್ ನಡೆಸುತ್ತಿರುವ ಶ್ರವಣ್ ರಾವ್ ಅವರ ನಿವಾಸ ಸೇರಿದಂತೆ ಸುಮಾರು ಹನ್ನೆರಡು ಇತರ ಸ್ಥಳಗಳಲ್ಲಿ ಪರಿಶೀಲನೆ ನಡೆಸಲಾಗಿದೆ. ಸಿಟಿ ಟಾಸ್ಕ್ ಫೋರ್ಸ್ನಲ್ಲಿ ಸೇವೆ ಸಲ್ಲಿಸುತ್ತಿದ್ದ ಮತ್ತೊಬ್ಬ ಪೊಲೀಸ್ ರಾಧಾ ಕಿಶನ್ ರಾವ್ ಅವರನ್ನೂ ಆರೋಪಿ ಎಂದು ಹೆಸರಿಸಲಾಗಿದ್ದು, ಅವರಿಗೂ ಲುಕ್ ಔಟ್ ನೋಟಿಸ್ ಜಾರಿ ಮಾಡಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ತೆಲಂಗಾಣ ಪೊಲೀಸ್ ಅಧಿಕಾರಿಗಳನ್ನು ತನಿಖೆ ನಡೆಸಲಾಗುತ್ತಿದೆ.
ಹೆಚ್ಚುವರಿ ಎಸ್ಪಿಗಳಾದ ಭುಜಂಗ ರಾವ್, ತಿರುಪತಣ್ಣ ಮತ್ತು ಉಪ ಎಸ್ಪಿ ಪ್ರಣೀತ್ ರಾವ್ ಅವರನ್ನು ಈಗಾಗಲೇ ಬಂಧಿಸಲಾಗಿದೆ. ಕಳೆದ ವಾರ ಬಂಧಿತರಾದ ಭುಜಂಗ ರಾವ್ ಮತ್ತು ತಿರುಪತಣ್ಣ ಅವರು ಖಾಸಗಿ ವ್ಯಕ್ತಿಗಳ ಮೇಲೆ ಅಕ್ರಮವಾಗಿ ನಿಗಾ ವಹಿಸಿ ಸಾಕ್ಷ್ಯ ನಾಶಪಡಿಸಿರುವುದಾಗಿ ತಪ್ಪೊಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಣೀತ್ ರಾವ್ ಅವರನ್ನು ಈ ತಿಂಗಳ ಆರಂಭದಲ್ಲೇ ಬಂಧಿಸಲಾಯಿತು. ಅಪರಿಚಿತ ವ್ಯಕ್ತಿಗಳ ಪ್ರೊಫೈಲ್ ಅಭಿವೃದ್ಧಿಪಡಿಸುವುದು, ಅನಧಿಕೃತ ರೀತಿಯಲ್ಲಿ ಅವರ ಚಟುವಟಿಕೆಯನ್ನು ಮೇಲ್ವಿಚಾರಣೆ ಮಾಡುವುದು, ಹಾಗೆಯೇ ಕೆಲವು ಕಂಪ್ಯೂಟರ್ ಸಿಸ್ಟಮ್ಗಳು ಮತ್ತು ಎಲೆಕ್ಟ್ರಾನಿಕ್ ಗ್ಯಾಜೆಟ್ಗಳಲ್ಲಿ ಸಂಗ್ರಹವಾಗಿರುವ ಡೇಟಾವನ್ನು ನಾಶಪಡಿಸಿದ ಆರೋಪ ಹೊರಿಸಲಾಗಿದೆ.