ಬೆಂಗಳೂರು: ಮಹದೇವಪುರ ವಲಯ ವ್ಯಾಪ್ತಿಯಲ್ಲಿ 110 ಹಳ್ಳಿಗಳ ಪೈಕಿ 42 ಹಳ್ಳಿಗಳು ಬರಲಿದ್ದು, ಎಲ್ಲಿಯೂ ನೀರಿನ ಅಭಾವ ಎದುರಾಗದಂತೆ ನೋಡಿಕೊಳ್ಳಬೇಕೆಂದು ಮುಖ್ಯ ಆಯುಕ್ತರಾದ ತುಷಾರ್ ಗಿರಿ ನಾಥ್ ರವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮಹದೇವಪುರ ವಲಯ ವ್ಯಾಪ್ತಿಯಲ್ಲಿ ಕುಡಿಯುವ ನೀರಿಗೆ ಸಂಬಂಧಿಸಿದಂತೆ ವಲಯ ಕಛೇರಿಯಲ್ಲಿ ನಡೆಸಿದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಮಹದೇವಪುರ ವಲಯ ವ್ಯಾಪ್ತಿಯಲ್ಲಿ 110 ಹಳ್ಳಿಗಳ ಪೈಕಿ ಮಹದೇವಪುರ ವ್ಯಾಪ್ತಿಯಲ್ಲಿ 31, ಕೆ.ಆರ್ ಪುರದಲ್ಲಿ 11 ಸೇರಿ ಒಟ್ಟು 42 ಹಳ್ಳಿಗಳು ಬರಲಿವೆ. ಈ ಭಾಗದಲ್ಲಿ ನೀರಿನ ಸಮಸ್ಯೆಯಾಗದಂತೆ ಕ್ರಮ ವಹಿಸಬೇಕೆಂದು ಸೂಚಿಸಿದರು.
ಮಹದೇವಪುರ ವಲಯ ವ್ಯಾಪ್ತಿಯಲ್ಲಿ ಹೆಚ್ಚು ನೀರಿನ ಸಮಸ್ಯೆ ಎದುರಿಸುತ್ತಿರುವ ಪ್ರದೇಶಗಳಲ್ಲಿ ಸಿಂಟೆಕ್ಸ್ ಟ್ಯಾಂಕ್ಗಳನ್ನು ಅಳವಡಿಸಿ ಜಲಮಂಡಳಿಯಿಂದ ನೀರಿನ ಪೂರೈಕೆ ಮಾಡಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮಹದೇವಪುರ ವಲಯ ವ್ಯಾಪ್ತಿಯಲ್ಲಿ 46 ಶುದ್ಧ ಕುಡಿಯುವ ನೀರಿನ ಘಕಟಗಳು ಬರಲಿದ್ದು, 42 ಘಟಕಗಳು ಕಾರ್ಯನಿರ್ವಹಿಸುತ್ತಿವೆ. 4 ಘಟಕಗಳು ಸ್ಥಗಿತಗೊಂಡಿದ್ದು, ಸದರಿ ಘಟಕಗಳಿಗೆ ಕೂಡಲೆ ತಾತ್ಕಾಲಿಕ ನೀರಿನ ವ್ಯವಸ್ಥೆ ಮಾಡಿಕೊಂಡು ನೀರಿನ ಪೂರೈಕೆ ಮಾಡಲು ಸೂಚಿಸಲಾಯಿತು.
ಜಲಮಂಡಳಿಯ ಜಲಗಾರಗಳಲ್ಲಿ ಏಕ ಕಾಲದಲ್ಲಿ ಮೂರು/ನಾಲ್ಕು ಟ್ಯಾಂಕರ್ ಗಳಿಗೆ ನೀರು ಪೂರೈಕೆ ಮಾಡುವ ಹಾಗೆ ಪೈಪ್ ಅಳವಡಿಸಿಕೊಂಡು ನೀರಿನ ಸಮಸ್ಯೆಯಿರುವ ಪ್ರದೇಶಗಳಿಗೆ ನೀರು ಪೂರೈಕೆ ಮಾಡಲು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸೂಚಿಸಿದರು.
ಮಹದೇವಪುರ ವಲಯ ವ್ಯಾಪ್ತಿಯಲ್ಲಿ ಎಷ್ಟು ಕೊಳವೆ ಬಾವಿಗಳು ಕಾರ್ಯನಿರ್ವಹಿಸುತ್ತಿವೆ, ಎಷ್ಟು ಬತ್ತಿ ಹೋಗಿವೆ, ಎಷ್ಟು ಕೊಳವೆ ಬಾವಿಗಳಿಗೆ ವಿದ್ಯುತ್ ಸಮಸ್ಯೆಯಿದೆ, ಯಂತ್ರಗಳು ಹಾಳಾಗಿವೆ, ಎಲ್ಲೆಲ್ಲಿ ಹೊಸ ಕೊಳವೆ ಬಾವಿಗಳನ್ನು ಕೊರೆಯಬೇಕಿದೆ ಎಂಬುದನ್ನು ಸರಿಯಾಗಿ ಪರಿಶೀಲಿಸಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ನಿರ್ದೇಶನ ನೀಡಿದರು.
ನೋಂದಣಿಯಾದ ಟ್ಯಾಂಕರ್ ಗಳು ಸ್ಟಿಕ್ಕರ್ ಗಳನ್ನು ಅಂಟಿಸಬೇಕು:
ಪಾಲಿಕೆ ವ್ಯಾಪ್ತಿಯಲ್ಲಿ ಈಗಾಗಲೆ ಸ್ವಯಂ ನೋಂದಣಿಯಾಗಿರುವ ಟ್ಯಾಂಕರ್ ಗಳನ್ನು ಆಯಾ ವಲಯವಾರು ನಿಯೋಜಿಸಲಾಗಿದ್ದು, ನೋಂದಣಿಯಾಗಿರುವ ಟ್ಯಾಂಕರ್ ಗಳಿಗೆ ಕಡ್ಡಾಯವಾಗಿ ಸ್ಟಿಕರ್ ಗಳನ್ನು ಅಂಟಿಸಿಕೊಳ್ಳಬೇಕಿದೆ. ಪ್ರತಿ ಟ್ಯಾಂಕರ್ ಮಾಲೀಕರು ಸ್ವಂ ನೋಂದಣಿ ಮಾಡಿಕೊಂಡಿರುವ ನೋಂದಣಿ ಪ್ರಮಾಣ ಪತ್ರವನ್ನು ಹಾಗೂ ಪಾಲಿಕೆ ನೀಡಿರುವ ಸ್ಟಿಕರ್ ನಲ್ಲಿ ವಾಹನದ ಸಂಖ್ಯೆ, ಮಾಲೀಕರ ಹೆಸರು, ದೂರುವಾಣಿ ಸಂಖ್ಯೆ ಹಾಗೂ ಸ್ವಂ ನೋಂದಣಿಯಾಗಿರುವ ಸಂಖ್ಯೆಯನ್ನು ಹಾಗೂ ವಲಯದ ಹೆಸರು ನಮೂದಿಸಿ ವಾಹನದ ಮೇಲೆ ಕಡ್ಡಾಯವಾಗಿ ಅಂಟಿಸಬೇಕು. ಸ್ಟಿಕ್ಕರ್ ಅಂಟಿಸದಿರುವ ಟ್ಯಾಂಕರ್ ಗಳ ಮೇಲೆ ಕ್ರಮ ಕೈಗೊಳ್ಳಲು ಸೂಚಿಸಿದರು.
ಈ ವೇಳೆ ವಲಯ ಆಯುಕ್ತರಾದ ರಮೇಶ್, ವಿಪತ್ತು ನಿರ್ವಹಣೆಯ ನೋಡಲ್ ಅಧಿಕಾರಿಯಾದ ಸುರೋಳ್ಕರ್ ವಿಕೋಸ್ ಕಿಶೋರ್, ಜಂಟಿ ಆಯುಕ್ತರಾದ ದಾಕ್ಷಾಯಿಣಿ, ಮುಖ್ಯ ಅಭಿಯಂತರರಾದ ಲೋಕೇಶ್, ಕಾರ್ಯಪಾಲಕ ಅಭಿಯಂತರರು, ಜಲಮಂಡಳಿ ಅಧಿಕಾರಿಗಳು ಸೇರಿದಂತೆ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.