ಕಳೆದ ಶುಕ್ರವಾರ ರಶ್ಯ ರಾಜಧಾನಿ ಮಾಸ್ಕೋದ ಸಭಾಂಗಣದಲ್ಲಿ ನಡೆದಿದ್ದ ಗುಂಡಿನ ದಾಳಿ ಮತ್ತು ಸ್ಫೋಟ ಪ್ರಕರಣದಲ್ಲಿ ಐಸಿಸ್ ಬಂದೂಕುಧಾರಿಗಳಿಗೆ ಮನೆಯನ್ನು ಬಾಡಿಗೆಗೆ ನೀಡಿದ್ದ ಆರೋಪದಲ್ಲಿ ವ್ಯಕ್ತಿಯೊಬ್ಬನನ್ನು ಅಧಿಕಾರಿಗಳು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಮೇ 22ರವರೆಗೆ ವಿಚಾರಣೆ ಪೂರ್ವ ಕಸ್ಟಡಿ ತೆಗೆದುಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ದಾಳಿಯ ವೇಳೆ ಗಂಭೀರ ಗಾಯಗೊಂಡಿದ್ದ 5 ಮಂದಿಯಲ್ಲಿ ಓರ್ವ ಚಿಕಿತ್ಸೆ ಫಲಿಸದೆ ಬುಧವಾರ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು ಒಟ್ಟು ಮೃತರ ಸಂಖ್ಯೆ 140ಕ್ಕೇರಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಶ್ಯದ ವಿದೇಶಾಂಗ ಇಲಾಖೆಯ ವಕ್ತಾರೆ ಮರಿಯಾ ಝಕರೋವಾ ` ಮಾಸ್ಕೋದಲ್ಲಿ ನಡೆದ ದಾಳಿಯನ್ನು ಐಸಿಸ್ ನಡೆಸಿದೆ ಎಂಬುದನ್ನು ನಂಬಲು ಕಷ್ಟವಾಗಿದೆ’ ಎಂದಿದ್ದಾರೆ.
ದಾಳಿಯನ್ನು ಜಾಗತಿಕ ಮಟ್ಟದಲ್ಲಿ ಖಂಡಿಸಿ ಸಂತಾಪ ಸೂಚಿಸಲಾಗಿದೆ. ಆದರೆ ಉಕ್ರೇನ್ ಅಧ್ಯಕ್ಷರು ಮಾತ್ರ ಸಂತಾಪದ ಮಾತನಾಡದೆ, ಈ ದಾಳಿಗೆ ರಶ್ಯವನ್ನೇ ಆರೋಪಿಸುವ ಪ್ರಯತ್ನ ನಡೆಸಿರುವುದು ಸಂಶಯಾಸ್ಪದವಾಗಿದೆ’ ಎಂದು ಅವರು ಹೇಳಿದ್ದಾರೆ.