ಬೆಂಗಳೂರು: ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ನೀಡಿದ್ದ ಪತ್ರಿಕಾ ಜಾಹೀರಾತು ಆಧಾರದಲ್ಲಿ ಸಲ್ಲಿಕೆಯಾಗಿದ್ದ ಖಾಸಗಿ ದೂರಿನ ವಿಚಾರಣೆ ನಡೆಸಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಎಐಸಿಸಿ ನಾಯಕ ರಾಹುಲ್ ಗಾಂಧಿ, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಖುದ್ದು ಹಾಜರಾಗುವಂತೆ ಸಮನ್ಸ್ ಜಾರಿ ಮಾಡುವಂತೆ ಪೊಲೀಸರಿಗೆ ಸೂಚಿಸಿದೆ ಎಂದು ಬಿಜೆಪಿ ಉಪಾಧ್ಯಕ್ಷೆ ಮಾಳವಿಕಾ ಅವಿನಾಶ್ ಸ್ಪಷ್ಟಪಡಿಸಿದ್ದಾರೆ.
ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಮಾಧ್ಯಮ ಕೇಂದ್ರದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಕಳೆದ ವರ್ಷ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಜಾಹೀರಾತು ನೀಡಿದ್ದ ಕಾಂಗ್ರೆಸ್ ಬಿಜೆಪಿ ವಿರುದ್ಧ ಮನಸ್ಸೋ ಇಚ್ಚೆ ಮಾತನಾಡಿತ್ತು,ಇದ ಖಾಸಗಿ ದೂರಿನ ಆಧಾರದಲ್ಲಿ ಅಂದಿನ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್,ಅಂದಿನ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಎಐಸಿಸಿ ನಾಯಕ ರಾಹುಲ್ ಗಾಂಧಿ ವಿರುದ್ಧ ಸಮನ್ಸ್ ಜಾರಿಯಾಗಿದೆ. ಮನಸೋ ಇಚ್ಚೆ ಜಾಹೀರಾತನ್ನು ಎಲ್ಲಾ ಪತ್ರಿಕೆಗಳಲ್ಲಿ ಕೊಡಲಾಗಿದ್ದರ ವಿರುದ್ಧ ಕೇಶವ ಪ್ರಸಾದ್ ಖಾಸಗಿ ದೂರು ಸಲ್ಲಿಸಿದ್ದರು ಈ ಪ್ರಕರಣದ ಪರಿಶೀಲನೆ ವೇಳೆ ಪೊಲೀಸರು ನ್ಯಾಯಾಲಯಕ್ಕೆ ಹಾಜರಾಗಿ ರಾಹುಲ್ ಗಾಂಧಿಗೆ ಸಮನ್ಸ್ ಕಳಿಸಿದ್ದೇವೆ ಆದರೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ನಮಗೆ ಸಿಕ್ಕುತ್ತಿಲ್ಲ. ಪ್ರವಾಸದಲ್ಲಿದ್ದಾರೆ ಹಾಗಾಗಿ ಸಮನ್ಸ್ ನೀಡಲಾಗಿಲ್ಲ ಎಂದು ಕೋರ್ಟ್ ಗೆ ತಿಳಿಸಿದ್ದಾರೆ, ಸಿಎಂ, ಡಿಸಿಎಂ ಕೈಗೆ ಸಿಗಲ್ಲ ಎನ್ನುತ್ತೀರಲ್ಲ ಎಂದು ಕೋರ್ಟ್ ಗರಂ ಆಗಿದ್ದು ಸಿಎಂ, ಡಿಸಿಎಂ ಕೈಗೆ ಸಿಗಲ್ಲ ಎನ್ನುವ ನೀವು ಅಪರಾಧಿಗಳನ್ನು ಹೇಗೆ ಹಿಡಿಯುತ್ತೀರಿ ಎನ್ನುವ ಅಸಮಧಾನ ವ್ಯಕ್ತಪಡಿಸಿ ಸಮನ್ಸ್ ಜಾರಿ ಮಾಡಲೇಬೇಕು ಎಂದು ಸೂಚಿಸಿದೆ. ಏಪ್ರಿಲ್ 29 ಏಪ್ರಿಲ್ ರಂದು ಸಿಎಂ ಡಿಸಿಎಂ ಹಾಜರಾಗಬೇಕು, ಜೂನ್ ಮೊದಲ ವಾರ ರಾಹುಲ್ ಹಾಜರಾಗಬೇಕು ಎಂದು ಕೋರ್ಟ್ ಹೇಳಿದೆ ಇದನ್ನು ನೋಡಿದರೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಯಾವ ರೀತಿ ಇದೆ ಎನ್ನುವುದು ಗೊತ್ತಾಗಲಿದೆ ಎಂದು ಟೀಕಿಸಿದರು.
ಕಾಂಗ್ರೆಸ್ ನಾಯಕಿ ಸುಪ್ರಿಯಾ ಶ್ರೀನಾಟೆ ಬಿಜೆಪಿ ಅಭ್ಯರ್ಥಿ ಕಂಗನಾ ರಾಣಾವತ್ ವಿರುದ್ಧ ವೈಯಕ್ತಿ ಟೀಕೆ ಮಾಡಿದ್ದನ್ನು ಖಂಡಿಸುತ್ತೇನೆ, ಇದು ಸರಿಯಲ್ಲ, ಟ್ವೀಟ್ ನಲ್ಲಿ ಅವರು ಬಳಸಿದ ಫೋಟೋ ಮತ್ತು ಪದಗಳು ಅತ್ಯಂತ ಖಂಡನೀಯ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಈ ವಿಚಾರದಲ್ಲಿ ಮೌನವಾಗಿರುವುದು ಅಚ್ಚರಿಯಾಗಿದೆ, ಕಾಂಗ್ರೆಸ್ ಕ್ಷಮೆ ಯಾಚಿಸಬೇಕು, ಚುನಾವಣಾ ಆಯೋಗ ಸ್ವಯಂ ದೂರು ದಾಖಲಿಸಿಕೊಂಡು ಕ್ರಮಕ್ಕೆ ಮುಂದಾಗಬೇಕು ಎಂದು ಒತ್ತಾಯಿಸಿದರು.
ನಂತರ ಮಾತನಾಡಿದ ವಿಧಾನ ಪರಿಷತ್ ಸದಸ್ಯೆ ಭಾರತಿ ಶೆಟ್ಟಿ,
ಮಹಿಳೆಯರಿಗೆ ಎಷ್ಟು ಟಿಕೆಟ್ ಕೊಟ್ಟರೂ ಸಮಾಧಾನ ಇರಲ್ಲ, ನಮ್ಮಲ್ಲಿ ಇಬ್ಬರಿಗೆ ಕೊಟ್ಟಿರುವುದು ನಮಗೆ ಖುಷಿ ಇದೆ, ಕಾಂಗ್ರೆಸ್ ಗೆ ಅಭ್ಯರ್ಥಿಗಳೇ ಸಿಕ್ಕಿಲ್ಲ ಹಾಗಾಗಿ ಆರು ಮಹಿಳೆಯರಿಗೆ ಟಿಕೆಟ್ ನೀಡಿದಂತಿದೆ, ನಮಗೂ ಇನ್ನು ಹೆಚ್ಚು ಸ್ಥಾನದ ನಿರೀಕ್ಷೆ ಇತ್ತು ಆದರೂ ಈಗ ಸಿಕ್ಕಿರುವ ಸ್ಥಾನಗಳಿಗೆ ತೃಪ್ತಿ ಇದೆ.ಮುಂದೆ 2029 ರಲ್ಲಿ ನಡೆಯುವ ಚುನಾವಣೆಗೆ ಸಹಜವಾಗಿ ಶೇ.33 ರಷ್ಟು ಸೀಟು ಮಹಿಳೆಯರಿಗೆ ಸಿಗಲಿದೆ ಎಂದರು.
ಕಾಂಗ್ರೆಸ್ ನಲ್ಲಿ ಲೋಕಸಭೆಗೆ ಸ್ಪರ್ಧೆ ಮಾಡಲು ಯಾವ ಮಂತ್ರಿ ಸಿದ್ದ ಇಲ್ಲ, ಅವರ ಮಕ್ಕಳ, ಅಕ್ಕ ಹೀಗೆ ರಾಜಕೀಯ ಗಂಧ ಗೊತ್ತಿಲ್ಲದವರನ್ನು ತರಲಾಗಿದೆ. ನಮ್ಮ ಗಾಯಿತ್ರಿ ಸಿದ್ದೇಶ ಬಹಳ ಹೆಚ್ಚು ತೊಡಗಿಕೊಂಡಿದ್ದಾರೆ, ಮಹಿಳಾ ಮೋರ್ಚಾದ ಅಭ್ಯಾಸ ವರ್ಗದ ಉಸ್ತುವಾರಿಯಾಗಿ ಕೆಲಸ ಮಾಡಿದ್ದಾರೆ. ಜನಸಂಘದಿಂದ ಕಾಲದಿಂದ ಅವರು ಕೆಲಸ ಮಾಡಿದ್ದಾರೆ ಎಂದು ಸಮರ್ಥಿಸಿಕೊಂಡರು.
ಬಿಜೆಪಿ ಮಹಿಳಾ ಕಾರ್ಯಕರ್ತರು ಈಶ್ವರಪ್ಪ ಸಭೆಗೆ ಹೋಗುತ್ತಿರುವುದು ತಪ್ಪಲ್ಲ:
ಈಶ್ವರಪ್ಪ ಸಭೆಗಳಿಗೆ ಹೆಚ್ಚಿನ ಮಹಿಳೆಯರು ಹೋಗುತ್ತಿರುವುದರಲ್ಲಿ ತಪ್ಪೇನಿಲ್ಲ, ಶಿವಮೊಗ್ಗ ಒಂದು ಕ್ಷೇತ್ರ ಹೊರತುಪಡಿಸಿ ಬೇರೆ ಕ್ಷೇತ್ರದ ಯಾರೂ ಹೋಗಿಲ್ಲ, ಅವರೇ ಬೆಳೆಸಿದವರು ಕಾರಣ ಅವರ ಸಭೆಗಳಿಗೆ ಪಕ್ಷದ ಮಹಿಳೆಯರು ಹೋಗಿದ್ದಾರೆ ತಪ್ಪೇನಿಲ್ಲ, ಕಾದು ನೋಡಿ ಈಶ್ವರಪ್ಪ ವಾಪಸ್ ಬರಲಿದ್ದಾರೆ, ಅವರು ಪಕ್ಷ ವಿರೋಧಿಯಲ್ಲ, ಅಸಮಧಾನ ಅಷ್ಟೆ, ವಾಪಸ್ ಬರಲಿದ್ದಾರೆ ಎಂದರು.