ಬೆಂಗಳೂರು:- ನರೇಗಾ ಕಾರ್ಮಿಕರಿಗೆ ಮೋದಿ ಗುಡ್ನ್ಯೂಸ್ ನೀಡಿದ್ದು, ಕರ್ನಾಟಕದಲ್ಲಿ ದಿನಗೂಲಿ ಭಾರಿ ಹೆಚ್ಚಳವಾಗಿದೆ.
ಕರ್ನಾಟಕ ಸೇರಿ ದೇಶಾದ್ಯಂತ ನರೇಗಾ ಯೋಜನೆಯ ದಿನಗೂಲಿಯನ್ನು ಕೇಂದ್ರ ಸರ್ಕಾರವು ಪರಿಷ್ಕರಣೆ ಮಾಡಿ ಅಧಿಸೂಚನೆ ಹೊರಡಿಸಿದೆ.
ನರೇಗಾ ಯೋಜನೆ ಅಡಿಯಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಕರ್ನಾಟಕದಲ್ಲಿ 33 ರೂ. ದಿನಗೂಲಿಯನ್ನು ಹೆಚ್ಚಳ ಮಾಡಲಾಗಿದೆ. ಇದರೊಂದಿಗೆ ಕರ್ನಾಟಕದಲ್ಲಿ ನರೇಗಾ ದಿನಗೂಲಿಯು 349 ರೂ.ಗೆ ಏರಿಕೆಯಾಗಿದೆ. 2024-25ನೇ ಸಾಲಿನಲ್ಲಿ ಕೇಂದ್ರ ಸರ್ಕಾರವು 33 ರೂ. ದಿನಗೂಲಿಯನ್ನು ಹೆಚ್ಚಳ ಮಾಡಿದ್ದು, 2024ರ ಏಪ್ರಿಲ್ 1ರಿಂದ ಹೊಸ ದಿನಗೂಲಿಯು ಜಾರಿಗೆ ಬರಲಿದೆ. ಇದರಿಂದ ಕರ್ನಾಟಕದಲ್ಲಿ ಲಕ್ಷಾಂತರ ನರೇಗಾ ಕಾರ್ಮಿಕರಿಗೆ ಅನುಕೂಲವಾಗಲಿದೆ
ಕರ್ನಾಟಕದಲ್ಲಿ ಕೇಂದ್ರ ಸರ್ಕಾರವು 2023-24ನೇ ಸಾಲಿನಲ್ಲಿ ನರೇಗಾ ದಿನಗೂಲಿಯನ್ನು ಕೇವಲ 7 ರೂ. ಹೆಚ್ಚಿಸಿತ್ತು. ಇದರೊಂದಿಗೆ ಕರ್ನಾಟಕದಲ್ಲಿ ನರೇಗಾ ದಿನಗೂಲಿಯು 316 ರೂ. ಆಗಿತ್ತು. 2022-23ನೇ ಸಾಲಿನಲ್ಲಿ 309 ರೂ. ದಿನಗೂಲಿ ನಿಗದಿಪಡಿಸಲಾಗಿತ್ತು. ಕರ್ನಾಟಕದಲ್ಲಿ ನರೇಗಾ ಕಾರ್ಮಿಕರಿಗೆ ದಿನಗೂಲಿ ಬಾಕಿ ಉಳಿದಿದ್ದು, ಕೇಂದ್ರ ಸರ್ಕಾರವು 702 ಕೋಟಿ ರೂ. ಬಾಕಿ ಉಳಿದಿದೆ ಎಂದು ರಾಜ್ಯ ಸರ್ಕಾರ ಅಸಮಾಧಾನ ವ್ಯಕ್ತಪಡಿಸಿತ್ತು. ಇದರ ಬೆನ್ನಲ್ಲೇ, ಕೇಂದ್ರ ಸರ್ಕಾರವು ದಿನಗೂಲಿಯನ್ನು ಪರಿಷ್ಕರಣೆ ಮಾಡಿದೆ.
ಕೇಂದ್ರ ಸರ್ಕಾರವು 2024-25ನೇ ಸಾಲಿನಲ್ಲಿ ಕರ್ನಾಟಕ ಸೇರಿ ಎಲ್ಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ನರೇಗಾ ದಿನಗೂಲಿಯನ್ನು ಏರಿಕೆ ಮಾಡಿದೆ. ದೇಶದಲ್ಲಿಯೇ ಅತಿ ಹೆಚ್ಚು ದಿನಗೂಲಿ ನಿಗದಿಪಡಿಸಿರುವ ರಾಜ್ಯಗಳಲ್ಲಿ ಕರ್ನಾಟಕವೂ ಒಂದಾಗಿದೆ.