ಬೆಂಗಳೂರು: ಕೋಲಾರ ದಂಗಲ್ ಸದ್ಯ ನಿಲ್ಲುವ ಲಕ್ಷಣ ಕಾಣ್ತಿಲ್ಲ.ಸಚಿವ ಮುನಿಯಪ್ಪ ಕುಟುಂಬಕ್ಕೆ ಕೋಲಾರ ಟಿಕೆಟ್ ಕೊಡುವ ವಿಚಾರದಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ದೊಡ್ಡ ಅಸಮಧಾನ ಸ್ಪೋಟವಾಗಿದೆ.ಇಂದು ಅಸಮಧಾನಿತ ಶಾಸಕರ ಜೊತೆ ಸಿಎಂ,ಡಿಸಿಎಂ ಸಂಧಾನ ಸಭೆ ನಡೆಸಿದ್ರು.ಅಲ್ದೇ ಕೆ.ಎಚ್.ಮುನಿಯಪ್ಪ ಪರೋಕ್ಷವಾಗಿ ಸಿಎಂ ಸಿದ್ದರಾಮಯ್ಯ ವಿರುದ್ಧ ಅಸಮಧಾನ ವ್ಯಕ್ತಪಡಿಸಿದ್ದಾರೆ.
ಯೆಸ್,ಲೋಕಸಭೆ ಚುನಾವಣೆಯ ಅಖಾಡ ರಂಗೇರಿದೆ.ಇಂದಿನಿಂದ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಮಾಡುತ್ತಿದ್ದಾರೆ.ಆದ್ರೆ,ಕಾಂಗ್ರೆಸ್ ಪಕ್ಷದಲ್ಲಿ ಎರಡು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ದೊಡ್ಡ ಅಸಮಧಾನ ಸ್ಪೋಟವಾಗಿದೆ.ಅದ್ರಲ್ಲೂ ಕೋಲಾರ ರಾಜಕಾರಣದಲ್ಲಿ ಸಚಿವ ಮುನಿಯಪ್ಪ ವಿರುದ್ಧ ಇಡೀ ಜಿಲ್ಲೆಯ ಸಚಿವರು,ಶಾಸಕರು ತಿರುಗಿಬಿದ್ದಿದ್ದಾರೆ.ಕೆ.ಎಚ್.ಮುನಿಯಪ್ಪ ಅಳಿಯ ಚಿಕ್ಕಪೆದ್ದಣ್ಣಗೆ ಬಹುತೇಕ ಕಾಂಗ್ರೆಸ್ ಟಿಕೆಟ್ ಕೊಡುತ್ತಿದ್ದಾರೆ ಅನ್ನೋ ವಿಚಾರ ಕೇಳುತ್ತಿದ್ದಂತೆ ನಿನ್ನೆ ಶಾಸಕರು ವಿಧಾನಸೌಧದಲ್ಲಿ ರಾಜೀನಾಮೆಯ ಹೈಡ್ರಾಮಾ ನಡೆಸಿದ್ರು.ಈ ಹಿನ್ನಲೆಯಲ್ಲಿ ಇಂದು ಅಸಮಧಾನಿತ ಶಾಸಕರ ಜೊತೆ ಸಿಎಂ,ಡಿಸಿಎಂ ಸಂಧಾನ ಸಭೆ ನಡೆಸಿದ್ರು.
ಇನ್ನು ನಿನ್ನೆ ವಿಧಾನಸೌಧದಲ್ಲಿ ರಾಜೀನಾಮೆ ಹೈಡ್ರಾಮಾ ನಡೆಸಿದ್ದ ಶಾಸಕರು ವಿರುದ್ಧ ಡಿಸಿಎಂ ಡಿ.ಕೆ.ಶಿವಕುಮಾರ್ ಕ್ಲಾಸ್ ತೆಗದುಕೊಂಡಿದ್ದಾರೆ.ಏನೇ ಸಮಸ್ಯೆ ಇದ್ರೆ ಪಕ್ಷದ ವೇದಿಕೆಯಲ್ಲಿ ಚರ್ಚೆ ಮಾಡಬೇಕು ಅದನ್ನ ಬಿಟ್ಟು ರಾಜೀನಾಮೆ ಹೈಡ್ರಾಮಾ ಮಾಡಬೇಕಿತ್ತಾ ಎಂದು ಕ್ಲಾಸ್ ತೆಗದುಕೊಂಡಿದ್ದಾರೆ. ಇನ್ನು ಸಂಧಾನ ಸಭೆಯಲ್ಲಿ ಚಿಕ್ಕಪೆದ್ದಣ್ಣ ಹೊರತುಪಡಿಸಿ ಬೇರೆ ಯಾರಿಗಾದರೂ ಟಿಕೆಟ್ ಕೊಡ್ಸಿ,ನಾವೆಲ್ಲರೂ ಒಟ್ಟಾಗಿ ಗೆಲ್ಲಿಸಿಕೊಂಡು ಬರುತ್ತೇವೆ ಎಂದಿದ್ದಾರೆ.ಈ ಹಿನ್ನಲೆಯಲ್ಲಿ ಸಂಧಾನ ಸಭೆ ಸಕ್ಸಸ್ ಆಗಿದೆ ಎಂದು ಕೋಲಾರ ಉಸ್ತುವಾರಿ ಸಚಿವ ಬೈರತಿ ಸುರೇಶ್ ಹೇಳಿದ್ದಾರೆ.ಇನ್ನು ನಿನ್ನೆ ನಡೆದ ಘಟನೆ ಬಗ್ಗೆ ಶಾಸಕರು ವಿಷಾದ ವ್ಯಕ್ತಪಡಿಸಿದ್ದಾರೆ.
ಇನ್ನು ಶಾಸಕರ ರಾಜೀನಾಮೆ ಡ್ರಾಮಾ ಎಂದು ಸಚಿವ ಕೆ.ಎಚ್.ಮುನಿಯಪ್ಪ ವ್ಯಂಗ್ಯ ಮಾಡಿದ್ದಾರೆ.ರಾಜೀನಾಮೆ ನಾಟಕದ ಸೂತ್ರಧಾರಿ ಎಂದು ನನಗೆ ಗೊತ್ತಿದೆ.ನನ್ನ ಮಾತಿನಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಪರೋಕ್ಷವಾಗಿ ಸಿಎಂ ಸಿದ್ದರಾಮಯ್ಯ ವಿರುದ್ಧ ಕೆ.ಎಚ್.ಮುನಿಯಪ್ಪ ಗುಟುರು ಹಾಕಿದ್ದಾರೆ.
ಇನ್ನು ಚಿಕ್ಕಬಳ್ಳಾಪುರ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಗೊಂದಲ ಮುಂದುವರೆದಿದೆ.ಒಟ್ಟಾರೆ.ಕೋಲಾರ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಬಣ ಬಡಿದಾಟ ಜೋರಾಗಿದೆ.ಕೋಲಾರ ನಾಯಕರ ಪ್ರತಿಷ್ಠೆಯಿಂದ ಯಾವುದೇ ಬಣಕ್ಕೂ ಟಿಕೆಟ್ ಸಿಕ್ಕರೂ ಚುನಾವಣೆ ಯಲ್ಲಿ ಒಳೇಟು ಎದುರಿಸುವ ಪರಿಸ್ಥಿತಿ ಉದ್ಭವವಾಗಿದೆ.