ಮಾಜಿ ಬಿಗ್ ಬಾಸ್ ಸ್ಪರ್ಧಿ ಕನ್ನಡ ಪರ ಹೋರಾಟಗಾರ ಪ್ರಶಾಂತ್ ಸಂಬರ್ಗಿ ಅವರಿಗೆ ಕಿಡಿಗೇಡಿಗಳು ಕೊಲೆ ಬೆದರಿಕೆ ಹಾಕಿದ್ದಾರೆ. ವಾಟ್ಸಪ್ ಮತ್ತು ಇ-ಮೇಲ್ ಮೂಲಕ ಬೆದರಿಕೆ ಹಾಕಿದ ಕಿಡಿಗೇಡಿಗಳು ಆ್ಯಸಿಡ್ ಹಾಕುವುದಾಗಿ ಎಚ್ಚರಿಸಿದ್ದಾರೆ. ಈ ಸಂಬಂಧವಾಗಿ ಪ್ರಶಾಂತ್ ಸಂಬರ್ಗಿ ಅವರು ಬೆಂಗಳೂರಿನ ಚೆನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಬೆದರಿಕೆ ಬಂದ ಹಿನ್ನೆಲೆಯಲ್ಲಿ ದೂರು ನೀಡಿದ ಸಂಬರ್ಗಿ ಬೆದರಿಕೆ ಹಾಕಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಹಾಗೂ ತಮಗೆ ರಕ್ಷಣೆ ನೀಡಬೇಕು ಎಂದು ದೂರಿನಲ್ಲಿ ಮನವಿ ಮಾಡಿಕೊಂಡಿದ್ದಾರೆ.
ವಿದೇಶದ ಮೊಬೈಲ್ ಸಂಖ್ಯೆಗಳಿಂದ ಪ್ರಶಾಂತ್ ಸಂಬರ್ಗಿ ಅವರಿಗೆ ಬೆದರಿಕೆ ಸಂದೇಶ ಬಂದಿದೆ. ಅಮೆರಿಕ, ಕ್ರೊಯೇಷ್ಯಾ ಮುಂತಾದ ದೇಶಗಳ ವಾಟ್ಸಪ್ ಸಂಖ್ಯೆಗಳನ್ನು ಬಳಸಿ ಬೆದರಿಕೆ ಸಂದೇಶ ಕಳಿಸಲಾಗಿದೆ. ಪ್ರಶಾಂತ್ ಸಂಬರ್ಗಿ ಅವರ ಫ್ಯಾಮಿಲಿ ಫೋಟೋವನ್ನು ಕಳಿಸಿ, ‘ಟಾರ್ಗೆಟ್’ ಎಂದು ಬರೆಯಲಾಗಿದೆ. ಪತ್ನಿ ಮತ್ತು ಮಕ್ಕಳನ್ನು ಕೂಡ ಬಲಿ ತೆಗೆದುಕೊಳ್ಳುವುದಾಗಿ ಬೆದರಿಕೆ ಸಂದೇಶ ಕಳಿಸಲಾಗಿದೆ.
‘ಮಾರ್ಚ್ 10ರ ಮಧ್ಯರಾತ್ರಿಯಿಂದ ನನಗೆ ಮೇಲ್ಕಂಡ ಮೊಬೈಲ್ ಸಂಖ್ಯೆಗಳಿಂದ ಬೆದರಿಕೆ ಸಂದೇಶ ಬಂದಿದೆ. ನಮ್ಮ ಫೋಟೋ ಕಳಿಸಿ ನನಗೆ ಮತ್ತು ನನ್ನ ಕುಟುಂಬದವರಿಗೆ ಜೀವ ಬೆದರಿಕೆ ಹಾಕಲಾಗಿದೆ. ನಮ್ಮ ಮೊಬೈಲ್ ಹ್ಯಾಕ್ ಮಾಡಲಾಗಿದೆ. ಅದರಲ್ಲಿನ ಖಾಸಗಿ ಮಾಹಿತಿಯನ್ನು ಕದಿಯಲಾಗಿದೆ. ವೈಯಕ್ತಿಕ ಫೋಟೋ, ಕಾಲ್ ರೆಕಾರ್ಡ್, ಎಸ್ಎಂಎಸ್ ಹಾಗೂ ಇಮೇಲ್ಗಳನ್ನು ಟ್ರಾನ್ಸ್ಫರ್ ಮಾಡಲಾಗಿದೆ’ ಎಂದು ಪ್ರಶಾಂತ್ ಸಂಬರ್ಗಿ ಅವರು ದೂರಿನಲ್ಲಿ ತಿಳಿಸಿದ್ದಾರೆ.
ಪ್ರಶಾಂತ್ ಸಂಬರ್ಗಿಗೆ ಬೆದರಿಕೆ ಹಾಕಿದ ಕಿಡಿಗೇಡಿಗಳಿಗೆ ರಾಮೇಶ್ವರಂ ಕೆಫೆ ಬಾಂಬ್ ಸ್ಪೋಟದ ನಂಟು ಇರುವುದು ಕಂಡುಬಂದಿದೆ. ಯಾಕೆಂದರೆ, ಬೆದರಿಕೆ ಸಂದೇಶದಲ್ಲಿ ರಾಮೇಶ್ವರಂ ಕೆಫೆ ಬಗ್ಗೆ ಉಲ್ಲೇಖ ಮಾಡಲಾಗಿದೆ. ದೂರಿನಲ್ಲಿ ತಿಳಿಸಿರುವಂತೆ, ಪ್ರಶಾಂತ್ ಸಂಬರ್ಗಿ ಅವರು ಮಾರ್ಚ್ 8ರಂದು ರಾಮೇಶ್ವರಂ ಕೆಫೆ ರೀ-ಓಪನಿಂಗ್ಗೆ ತೆರಳಿದ್ದರು. ಆಗ ಕೆಲವು ಸುದ್ದಿ ವಾಹಿನಿಗಳಿಗೆ ಪ್ರತಿಕ್ರಿಯೆ ನೀಡಿದ್ದರು. ಆ ಬಳಿಕ ಕಿಡಿಗೇಡಿಗಳಿಂದ ಬೆದರಿಕೆ ಸಂದೇಶ ಬರಲು ಆರಂಭವಾಗಿದ್ದು ಕಿಡಿಗೇಡಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ತಿಳಿಸಿದ್ದಾರೆ.