ಭಯೋತ್ಪಾದನೆ ನಿಗ್ರಹಿಸಲು ಪಾಕಿಸ್ತಾನಕ್ಕೆ ಸಹಾಯ ಮಾಡಲು ಸಿದ್ಧವಿರುವುದಾಗಿ ಚೀನಾ ಹೇಳಿದೆ. ಪಾಕಿಸ್ತಾನದ ಖೈಬರ್-ಪಖ್ತುಂಖ್ವಾ ಪ್ರಾಂತ್ಯದ ಬೆಶಾಮ್ನಲ್ಲಿ ನಡೆದ ಆತ್ಮಾಹುತಿ ಬಾಂಬ್ ಸ್ಫೋಟದಲ್ಲಿ ಐವರು ಚೀನೀ ಪ್ರಜೆಗಳು ಸಾವನ್ನಪ್ಪಿದ್ದು, ಈ ಹಿನ್ನೆಲೆಯಲ್ಲಿ ಚೀನಾದ ಈ ಪ್ರಸ್ತಾವನೆ ಮಹತ್ವ ಪಡೆದುಕೊಂಡಿದೆ.
ಆತ್ಮಾಹುತಿ ಬಾಂಬ್ ದಾಳಿಯ ಬಳಿಕ ಪಾಕಿಸ್ತಾನದಲ್ಲಿರುವ ತನ್ನ ಪ್ರಜೆಗಳಿಗೆ ಹೆಚ್ಚಿನ ಭದ್ರತೆ ನೀಡಬೇಕೆಂದು ಚೀನಾ ಸರ್ಕಾರ ಪಾಕಿಸ್ತಾನ ಸರ್ಕಾರಕ್ಕೆ ಮನವಿ ಮಾಡಿದೆ.
“ಭಯೋತ್ಪಾದಕ ದಾಳಿಗಳು ಸೇರಿದಂತೆ ವಿವಿಧ ಭದ್ರತಾ ಅಪಾಯಗಳು ಮತ್ತು ಸವಾಲುಗಳನ್ನು ನಿಭಾಯಿಸಲು, ಪ್ರಾದೇಶಿಕ ಶಾಂತಿ ಮತ್ತು ಸ್ಥಿರತೆಯನ್ನು ಜಂಟಿಯಾಗಿ ರಕ್ಷಿಸಲು ಚೀನಾದ ಮಿಲಿಟರಿ ಪಾಕಿಸ್ತಾನದೊಂದಿಗೆ ಕೆಲಸ ಮಾಡಲು ಸಿದ್ಧವಿದೆ” ಎಂದು ಚೀನಾದ ರಾಷ್ಟ್ರೀಯ ರಕ್ಷಣಾ ಸಚಿವಾಲಯದ ವಕ್ತಾರ ಕರ್ನಲ್ ವು ಕಿಯಾನ್ ಹೇಳಿದ್ದಾರೆ.
“ಚೀನಾ ಎಲ್ಲ ರೀತಿಯ ಭಯೋತ್ಪಾದನೆಯನ್ನು ವಿರೋಧಿಸುತ್ತದೆ. ಭಯೋತ್ಪಾದನೆಯ ವಿರುದ್ಧ ಹೋರಾಡಲು ಪಾಕಿಸ್ತಾನವನ್ನು ದೃಢವಾಗಿ ಬೆಂಬಲಿಸುತ್ತದೆ ಮತ್ತು ಪಾಕಿಸ್ತಾನದಲ್ಲಿನ ಚೀನಾದ ಸಿಬ್ಬಂದಿ, ಯೋಜನೆಗಳು ಮತ್ತು ಸಂಸ್ಥೆಗಳ ಸುರಕ್ಷತೆ ಮತ್ತು ಭದ್ರತೆಗಾಗಿ ಸಾಧ್ಯವಿರುವ ಎಲ್ಲವನ್ನೂ ಮಾಡಲು ಚೀನಾ ಬದ್ಧವಾಗಿದೆ” ಎಂದು ಅವರು ತಿಳಿಸಿದ್ದಾರೆ.
ಚೀನಾದ ಪ್ರಜೆಗಳು, ಯೋಜನೆಗಳು ಮತ್ತು ಸಂಸ್ಥೆಗಳನ್ನು ರಕ್ಷಿಸಲು ಸುರಕ್ಷತಾ ಕ್ರಮಗಳನ್ನು ಹೆಚ್ಚಿಸುವಂತೆ ಇದೇ ಸಂದರ್ಭದಲ್ಲಿ ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರರು ಪಾಕಿಸ್ತಾನಕ್ಕೆ ಒತ್ತಾಯಿಸಿದರು.
ಈ ಮಧ್ಯೆ ಪಾಕಿಸ್ತಾನದ ಆಂತರಿಕ ಸಚಿವ ಮೊಹ್ಸಿನ್ ನಖ್ವಿ ಶುಕ್ರವಾರ ಇಸ್ಲಾಮಾಬಾದ್ನಲ್ಲಿರುವ ಚೀನಾ ದೂತಾವಾಸಕ್ಕೆ ಭೇಟಿ ನೀಡಿ ಚೀನಾದ ತನಿಖಾ ತಂಡದೊಂದಿಗೆ ಸಂಕ್ಷಿಪ್ತ ಸಭೆ ನಡೆಸಿದರು. ಭಯೋತ್ಪಾದನಾ ದಾಳಿಯ ಬಗ್ಗೆ ನಡೆಯುತ್ತಿರುವ ತನಿಖೆಯ ಬಗ್ಗೆ ಮತ್ತು ದಾಳಿಯಲ್ಲಿ ಭಾಗಿಯಾಗಿರುವವರನ್ನು ಪತ್ತೆ ಮಾಡಿ ಶಿಕ್ಷೆ ವಿಧಿಸುವ ನಿಟ್ಟಿನಲ್ಲಿ ಪಾಕಿಸ್ತಾನವು ಸಂಪೂರ್ಣ ಸಹಕಾರ ನೀಡುವುದಾಗಿ ಅವರು ಚೀನಾದ ತನಿಖಾ ತಂಡಕ್ಕೆ ಭರವಸೆ ನೀಡಿದ್ದಾರೆ.