ಭಾರತದೊಂದಿಗೆ ವ್ಯಾಪಾರ ವಹಿವಾಟು ಆರಂಭಿಸಲು ಪಾಕಿಸ್ತಾನ ಎದುರು ನೋಡುತ್ತಿದೆ ಎಂಬ ಸುದ್ದಿ ಕೇಳಿ ಬಂದಿತ್ತು. ಆದರೆ ಇದೀಗ ಪಾಕಿಸ್ತಾಣ ಸರ್ಕಾರ ಮತ್ತೊಮ್ಮೆ ಯೂ ಟರ್ನ್ ಹೊಡೆದಿದೆ. ಭಾರತದೊಂದಿಗೆ ವ್ಯಾಪಾರ ಸಂಬಂಧಗಳನ್ನು ಪುನಾರಂಭಿಸುವ ಯಾವುದೇ ಯೋಜನೆ ಇಲ್ಲ ಎಂದು ಆಕ್ ವಿದೇಶಾಂಗ ಕಚೇರಿ ತಿಳಿಸಿದೆ.
ಭಾರತದೊಂದಿಗೆ ವ್ಯಾಪಾರ ಸಂಬಂಧ ಪುನಾರಂಭಿಸಲು ಇಸ್ಲಾಮಾಬಾದ್ ಗಂಭೀರವಾಗಿ ಚಿಂತನೆ ನಡೆಸುತ್ತಿದೆ ಎಂದು ಹೊಸ ವಿದೇಶಾಂಗ ಸಚಿವ ಇಶಾಕ್ ದಾರ್ ಹೇಳಿದ ಕೆಲವೇ ದಿನಗಳ ಈ ಹೇಳಿಕೆ ನೀಡಲಾಗಿದೆ.
ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಹಿಂತೆಗೆದುಕೊಳ್ಳುವ ಸಂವಿಧಾನದ 370 ನೇ ವಿಧಿಯನ್ನು ಪ್ರಧಾನಿ ನರೇಂದ್ರ ಮೋದಿ ಸರ್ಕಾರ ರದ್ದುಪಡಿಸಿದ ನಂತರ 2019 ರಿಂದ ಉಭಯ ದೇಶಗಳ ನಡುವಿನ ವ್ಯಾಪಾರ ಸಂಬಂಧಗಳು ಸ್ಥಗಿತಗೊಂಡಿವೆ.
ಈ ಬಗ್ಗೆ ಸಾಪ್ತಾಹಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪಾಕಿಸ್ತಾನ ವಿದೇಶಾಂಗ ಕಚೇರಿ ವಕ್ತಾರ ಮುಮ್ತಾಜ್ ಜಹ್ರಾ ಬಲೂಚ್, 2019 ರಲ್ಲಿ ಭಾರತವು ಅಕ್ರಮವಾಗಿ ಆಕ್ರಮಿತ ಜಮ್ಮು ಮತ್ತು ಕಾಶ್ಮೀರದಲ್ಲಿ ಕಾನೂನುಬಾಹಿರ ಕ್ರಮಗಳನ್ನು ಕೈಗೊಂಡಾಗಿನಿಂದ ಪಾಕಿಸ್ತಾನ – ಭಾರತ ವ್ಯಾಪಾರ ಸಂಬಂಧಗಳು ಕಡಿತವಾಗಿವೆ. ಈ ಬಗ್ಗೆ ಪಾಕಿಸ್ತಾನದ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಹೇಳಿದರು.
ಮಾರ್ಚ್ 23 ರಂದು ಲಂಡನ್ನಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ್ದ ಪಾಕಿಸ್ತಾನದ ವಿದೇಶಾಂಗ ಸಚಿವ ದಾರ್, ಭಾರತದೊಂದಿಗೆ ವ್ಯಾಪಾರ ಚಟುವಟಿಕೆಗಳನ್ನು ಪುನಾರಂಭಿಸಲು ಪಾಕಿಸ್ತಾನದ ವ್ಯಾಪಾರ ಸಮುದಾಯ ಉತ್ಸುಕತೆ ಹೊಂದಿದೆ ಎಂದು ಹೇಳಿದ್ದರು. ಪಾಕಿಸ್ತಾನದ ಉದ್ಯಮಿಗಳು ಭಾರತದೊಂದಿಗೆ ವ್ಯಾಪಾರವನ್ನು ಪುನಾರಂಭಿಸಲು ಬಯಸುತ್ತಿದ್ದಾರೆ ಎಂದಿದ್ದ ಅವರು, ಇಸ್ಲಾಮಾಬಾದ್ ನವದೆಹಲಿಯೊಂದಿಗಿನ ವ್ಯಾಪಾರದ ವಿಷಯಗಳನ್ನು ಗಂಭೀರವಾಗಿ ಪರಿಶೀಲಿಸಲಿದೆ ಎಂದು ತಿಳಿಸಿದ್ದರು. ಪಾಕಿಸ್ತಾನ ವಿದೇಶಾಂಗ ಸಚಿವರ ಈ ಹೇಳಿಕೆಗಳು ಭಾರತದ ಬಗ್ಗೆ ಆ ದೇಶದ ರಾಜತಾಂತ್ರಿಕ ನಿಲುವಿನಲ್ಲಿ ಸಂಭಾವ್ಯ ಬದಲಾವಣೆ ಸೂಚಿಸುತ್ತವೆ.
ಏಪ್ರಿಲ್ 2021 ರಲ್ಲಿ ಪಾಕಿಸ್ತಾನದ ಆರ್ಥಿಕ ಸಮನ್ವಯ ಸಮಿತಿ (ಇಸಿಸಿ) ಭಾರತದಿಂದ ಹತ್ತಿ ಮತ್ತು ಸಕ್ಕರೆ ಆಮದಿಗೆ ಅನುಮತಿ ನೀಡಿದಾಗ ಇದೇ ರೀತಿಯ ಪರಿಸ್ಥಿತಿ ಉದ್ಭವಿಸಿತ್ತು. ಆದಾಗ್ಯೂ ಈ ನಿರ್ಧಾರವನ್ನು ಆಗಿನ ಇಮ್ರಾನ್ ಖಾನ್ ಕ್ಯಾಬಿನೆಟ್ ತಕ್ಷಣ ಮುಂದೂಡಿತ್ತು. 2019 ರ ಆಗಸ್ಟ್ನಲ್ಲಿ ಕಾಶ್ಮೀರದ ಬಗ್ಗೆ ತೆಗೆದುಕೊಂಡ ಕ್ರಮಗಳನ್ನು ಹಿಂತೆಗೆದುಕೊಳ್ಳುವವರೆಗೆ ಭಾರತದೊಂದಿಗಿನ ಸಂಬಂಧವನ್ನು ಸಾಮಾನ್ಯಗೊಳಿಸಲು ಸಾಧ್ಯವಿಲ್ಲ ಎಂದು ಇಮ್ರಾನ್ ಖಾನ್ ಸ್ಪಷ್ಟಪಡಿಸಿದ್ದಾರೆ ಎಂದು ಅಂದಿನ ಮಾನವ ಹಕ್ಕುಗಳ ಸಚಿವ ಶಿರೀನ್ ಮಜಾರಿ ತಿಳಿಸಿದ್ದರು.