ಲಕ್ನೋ: ಗ್ಯಾಂಗ್ಸ್ಟರ್, ರಾಜಕಾರಣಿ ಮುಖ್ತರ್ ಅನ್ಸಾರಿ ಸಾವಿನಿಂದ ನನಗೆ ನ್ಯಾಯ ಸಿಕ್ಕಿದೆ ಎಂದು ಆತನಿಂದ ಹತ್ಯೆಗೀಡಾದ ಬಿಜೆಪಿ ಶಾಸಕ ಕೃಷ್ಣಾನಂದ್ ರೈ ಅವರ ಪತ್ನಿ ಅಲ್ಕಾ ರೈ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ವಾರಣಾಸಿಯಲ್ಲಿ ಮಾತನಾಡಿದ ಅವರು, ನಾನು ನ್ಯಾಯಕ್ಕಾಗಿ ದೇವರನ್ನು ಪ್ರಾರ್ಥಿಸುತ್ತಿದ್ದೆ. ದೇವರು ಅದನ್ನು ಪೂರೈಸಿದ್ದಾನೆ. ಪತಿಯ ಹತ್ಯೆಯ ನಂತರ ನಾವು ಎಂದು ಹೋಳಿ ಆಚರಿಸಲಿಲ್ಲ. ನ್ಯಾಯ ಸಿಕ್ಕ ಈ ದಿನವನ್ನು ಹೋಳಿ ಎಂದು ನಾನು ಭಾವಿಸುತ್ತೇನೆ. ಆತನ ಸಾವಿನಿಂದ, ಅನಾಥರಾದ ಮಕ್ಕಳಿಗೆ ಸಂತೋಷವಾಗಿದೆ ಎಂದಿದ್ದಾರೆ
ಮೃತ ಮುಖ್ತರ್ ಅನ್ಸಾರಿಯ ಮಗ ಉಮರ್ ಅನ್ಸಾರಿ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ತನ್ನ ತಂದೆಗೆ ಆಹಾರದಲ್ಲಿ ವಿಷವನ್ನು ನೀಡಲಾಗಿತ್ತು ಎಂದು ಆರೋಪಿಸಿದ್ದಾರೆ. ಇಡೀ ದೇಶಕ್ಕೆ ಎಲ್ಲವೂ ತಿಳಿದಿದೆ. ಎರಡು ದಿನಗಳ ಹಿಂದೆ ನಾನು ಅವರನ್ನು ಭೇಟಿಯಾಗಲು ಬಂದಿದ್ದೆ. ನನಗೆ ಅವಕಾಶ ನೀಡಲಿಲ್ಲ, ಸ್ಲೋ ಪಾಯ್ಸನ್ ನೀಡಿದ ಆರೋಪದ ಬಗ್ಗೆ ನಾವು ಮೊದಲೇ ಹೇಳಿದ್ದೇವೆ. ಈಗಲೂ ನಾನು ಅದನ್ನೇ ಹೇಳುತ್ತೇನೆ. ನಮಗೆ ನ್ಯಾಯಾಲಯದಲ್ಲಿ ನ್ಯಾಯ ಸಿಗುವ ನಂಬಿಕೆ ಇದೆ ಎಂದಿದ್ದಾರೆ.
ಜೈಲಿನಲ್ಲಿದ್ದ ಮುಖ್ತಾರ್ ಅನ್ಸಾರಿ ಗುರುವಾರ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದ್ದರು. ಉತ್ತರ ಪ್ರದೇಶದ (Uttar Pradesh) ಮಾವ್ದಿಂದ ಐದು ಬಾರಿ ಗೆದ್ದು ಶಾಸಕರಾಗಿದ್ದರು. ಅವರ ವಿರುದ್ಧ 61 ಕ್ರಿಮಿನಲ್ ಪ್ರಕರಣಗಳಿದ್ದು, ಅದರಲ್ಲಿ 15 ಕೊಲೆ ಆರೋಪದ ಪ್ರಕರಣಗಳಾಗಿವೆ.