ಬೆಂಗಳೂರು:- 42 ವರ್ಷದ ಮಹಿಳೆಯನ್ನು ಚಾಕುವಿನಿಂದ ಇರಿದು ಬರ್ಬರವಾಗಿ ಪಾಗಲ್ ಪ್ರೇಮಿ ಕೊಲೆ ಮಾಡಿದ ಘಟನೆ ಬೆಂಗಳೂರಿನ ಜಯನಗರದಲ್ಲಿ ಜರುಗಿದೆ.
ಫರೀದಾ ಖಾನ್ (42) ಮೃತ ಮಹಿಳೆ ಎಂದು ತಿಳಿದು ಬಂದಿದೆ. ಗಿರೀಶ್ @ ರೆಹಾನ್ ಕೊಲೆ ಮಾಡಿದ ಆರೋಪಿ. ಸದ್ಯ ಪೊಲೀಸರ ವಶದಲ್ಲಿರುವ ಆರೋಪಿ 22 ವರ್ಷದ ಮಗಳಿರುವ ಮಹಿಳೆಯನ್ನು ಪ್ರೀತಿಸಿದ್ದು ಹೇಗೆ? ಹಾಗೂ ಆಕೆಯನ್ನು 25 ಬಾರಿ ಇರಿಯಲು ಕಾರಣವೇನು ಎಂಬ ಬಗ್ಗೆ ಎಳೆ ಎಳೆಯಾಗಿ ಕಥೆ ಬಿಚ್ಚಿಟ್ಟಿದ್ದಾನೆ.
ಬೆಂಗಳೂರಿನಲ್ಲಿ ಸ್ಪಾವೊಂದರಲ್ಲಿ ಕೆಲಸ ಮಾಡ್ತಿದ್ದ 42 ವರ್ಷದ ಫರಿದಾ ಗಂಡನಿಗೆ ಡಿವೋರ್ಸ್ ಕೊಟ್ಟು ಕೋಲ್ಕತ್ತಾದಿಂದ ಬೆಂಗಳೂರಿಗೆ ಬಂದು ನೆಲೆಸಿ ಹೊಸ ಜೀವನ ಕಟ್ಟಿಕೊಂಡಿದ್ದಳು. ಫರಿದಾಗೆ 22 ವರ್ಷದ ಮಗಳು ಕೂಡ ಇದ್ದಾಳೆ. ಇನ್ನು ಮೂಲತಃ ಬೆಂಗಳೂರು ಯಡಿಯೂರು ನಿವಾಸಿಯಾಗಿರುವ 32 ವರ್ಷದ ಗಿರೀಶ್ ಸ್ಪೇರ್ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದು ಒಮ್ಮೆ ಮಸಾಜ್ ಮಾಡಿಸಿಕೊಳ್ಳಲು ಸ್ಪಾಗೆ ಹೋದಾಗ ಫರಿದಾ ಪರಿಚಯವಾಗಿತ್ತು. 2022ರಲ್ಲಿ ಗಿರೀಶ್ ಹಾಗೂ ಫರಿದಾಗೆ ಪರಿಚಯವಾಗಿ ಪರಿಚಯ ಸ್ನೇಹಕ್ಕೆ ತಿರುಗಿತ್ತು. ಅಂದಿನಿಂದ ಫರಿದಾ ಜೊತೆಗೆ ಗಿರೀಶ್ ಸಂಪರ್ಕ ಬೆಳೆಸಿದ್ದ. ಅಲ್ಲದೆ ಇವರ ನಡುವೆ ದೈಹಿಕ ಸಂಪರ್ಕ ಸಹ ಆಗಿತ್ತು.
ಈಗಾಗಲೇ ಮದುವೆಯಾಗಿ ಗಂಡನಿಂದ ಡಿವೋರ್ಸ್ ಪಡೆದಿದ್ದ ಫರಿದಾಗೆ ಗಿರೀಶ್ ಮದುವೆಯಾಗುವಂತೆ ಪೀಡಿಸುತ್ತಿದ್ದ. ಒಂದು ಕಡೆ ಡಿವೋರ್ಸ್ ಬಳಿಕ ಗಂಡ ತೀರಿಕೊಂಡ ನೋವು ಹಾಗೂ ತನಗೆ 22 ವರ್ಷದ ಮಗಳಿದ್ದಾಳೆ ಎಂಬ ಚಿಂತೆಯಲ್ಲಿದ್ದ ಫರಿದಾ ಗಿರೀಶ್ ಜೊತೆ ಮದುವೆಯಾಗಲು ನಿರಾಕರಿಸಿದ್ದಳು. ಇದೇ ತಿಂಗಳು 6 ರಂದು ಫರಿದಾ ಹಾಗೂ ಆಕೆಯ ಮಗಳು ಕೊಲ್ಕತ್ತಾಗೆ ತೆರಳಿದ್ದರು. ಮಗಳಿಗೆ ಕಾಲೇಜಿಗೆ ಸೇರಿಸುವ ಉದ್ದೇಶದಿಂದ ಕೊಲ್ಕತ್ತಾಗೆ ತೆರಳಿದ್ದಳು. 29 ರಂದು ಗಿರೀಶ್ನ ಹುಟ್ಟುಹಬ್ಬ ಇತ್ತು. ಹೀಗಾಗಿ 28ರಂದು ಫರಿದಾ ಫ್ಲೈಟ್ ನಲ್ಲಿ ಬೆಂಗಳೂರಿಗೆ ಹಿಂತಿರುಗಿದ್ದಳು. ಇಬ್ಬರೂ ಸೇರಿ 29 ರಂದು ಹುಟ್ಟುಹಬ್ಬದ ಸಂಭ್ರಮಾಚರಣೆ ಕೂಡ ಮುಗಿಸಿದ್ರು. ಜೆಪಿ ನಗರದ ಓಯೋ ರೂಂ ನಲ್ಲಿ ವಾಸವಿದ್ರು. ಕೊಲ್ಕತ್ತಾದಲ್ಲಿದ್ದಾಗ ಗಿರೀಶ್ ಗೆ ಸುಳ್ಳು ಹೇಳಿ ಫರಿದಾ ಬೇರೆ ಕಡೆ ಹೋಗಿದ್ದಳು. ಸ್ನೇಹಿತೆ ಜೊತೆಗೆ ಬೇರೆ ಕೆಲಸಕ್ಕೆ ತೆರಳಿದ್ದಳು. ಈ ವಿಚಾರವಾಗಿ ಫರಿದಾ ಸ್ನೇಹಿತೆ ಗಂಡನಿಗೆ ಕರೆ ಮಾಡಿ ಗಿರೀಶ್ ಬೈದಿದ್ದ. ಫರಿದಾಳನ್ನ ನಿನ್ನ ಪತ್ನಿ ಹಾಳು ಮಾಡ್ತಿದ್ದಾಳೆ ಎಂದು ಕೋಪಗೊಂಡಿದ್ದ. ಆ ಕೋಪ ಕೂಡ ಗಿರೀಶ್ಗೆ ಇತ್ತು. ಆದರೆ ಹುಟ್ಟುಹಬ್ಬದ ಸಂಭ್ರಮಾಚರಣೆ ವೇಳೆ ಎಲ್ಲಾ ಮರೆತಿದ್ದ.
ಮಾರ್ಚ್ 30 ರಂದು ಕೂಡ ಫರಿದಾಳನ್ನು ಕರೆದುಕೊಂಡು ಶಾಲಿನಿ ಗ್ರೌಂಡ್ ಗೆ ಬಂದಿದ್ದ. ಆಕೆಯನ್ನ ಕೊಲೆ ಮಾಡಲೇಬೇಕು ಎಂದು ನಿರ್ಧರಿಸಿ ಚಾಕು ಖರೀದಿಸಿದ್ದ. ನಾವು ಮದುವೆ ಆಗೋಣ, ಈ ಕೆಲಸ ಎಲ್ಲಾ ಬಿಡು ಎಂದು ಮನವಿ ಮಾಡಿದ್ದ. ಆದರೆ ಫರಿದಾ ಇದಕ್ಕೆ ಒಪ್ಪದಿದ್ದಾಗ ಚಾಕುವಿನಿಂದ ಕತ್ತು ಕೊಯ್ದು ಕೊಲೆ ಮಾಡಿದ್ದಾನೆ. ಅಲ್ಲದೆ ದೇಹದ ವಿವಿಧೆಡೆ 25ಕ್ಕೂ ಹೆಚ್ಚು ಬಾರಿ ಇರಿದಿದ್ದಾನೆ. ಆತನ ಕೋಪಕ್ಕೆ ಫರಿದಾ ಕರಳು ಕೂಡ ಆಚೆ ಬಂದಿತ್ತು. ಕೊಲೆ ಬಳಿಕ ಪೊಲೀಸ್ ಠಾಣೆಗೆ ಬಂದು ಗಿರೀಶ್ ಶರಣಾಗಿದ್ದಾನೆ.