ರಾಜ್ಯ ರಾಜಕೀಯದಲ್ಲಿ ಹಲವು ನಾಟಕೀಯ ಏಳುಬೀಳುಗಳನ್ನು ಕಂಡ 15ನೇ ವಿಧಾನಸಭೆ ಅವಧಿ ಕೊನೆ ಹಂತಕ್ಕೆ ಬಂದಿದೆ. 2023ರ ವಿಧಾನಸಭಾ ಸಾರ್ವತ್ರಿಕ ಚುನಾವಣೆಗೆ ಒಂದು ತಿಂಗಳಲ್ಲಿ ಮುಹೂರ್ತ ನಿಗದಿಯಾಗಲಿದ್ದು, ಕಾದಾಟಕ್ಕೆ ಅಖಾಡ ಸಜ್ಜಾಗಿದೆ. ಇನ್ನೇನು ಚುನಾವಣೆಗೆ ದಿನಾಂಕ ಪ್ರಕಟವಾಗಬೇಕಿದ್ದು, ಈಗಾಗಲೇ ಪ್ರಮುಖ ಪಕ್ಷಗಳಲ್ಲಿ ರಾಜಕೀಯ ಚಟುವಟಿಕೆ ಗರಿಗೆದರಿದೆ. ಇತ್ತ ಮೂರು ಪಕ್ಷಗಳು (Congress, BJP, JDS) ಹೇಗಾದರೂ ಮಾಡಿ ಈ ಬಾರಿ ಆಡಳಿತದ ಚುಕ್ಕಾಣಿ ಹಿಡಿಯಲೇಬೇಕು ಎಂದು ಕಾರ್ಯತಂತ್ರ ರೂಪಿಸುತ್ತಿವೆ. ಅತ್ತ ಈ ಸಲ ನನಗೇ ಟಿಕೆಟ್ ಗ್ಯಾರಂಟಿ ಎಂದುಕೊಂಡಿರುವ ಆಕಾಂಕ್ಷಿಗಳು ಅಖಾಡದಲ್ಲಿ ಕಲಿಗಳಂತೆ ಕಾದಾಡಲು ಪೂರ್ವ ತಯಾರಿ ನಡೆಸುತ್ತಿದ್ದಾರೆ.
ಅದೇನೇ ಇರಲಿ, ಈ ಬಾರಿಯ ಚುನಾವಣಾ ಬೆಳವಣಿಗೆಯನ್ನು ತಿಳಿಯುವ ಮುನ್ನ , ಹಿಂದಿನ ರಾಜಕೀಯ ಚಿತ್ರಣವನ್ನು ನಾವು ತಿಳಿದುಕೊಳ್ಳುವುದು ಅತ್ಯಗತ್ಯ. “ ಇತಿಹಾಸ ಬಲ್ಲದವನು ಇತಿಹಾಸ ಸೃಷ್ಟಿಸಲಾರ” ಎಂಬ ಮಾತಿನಂತೆ ನಾವು ಕಳೆದ ಅಂದರೆ, 2018ರ ವಿಧಾನಸಭಾ ಚುನಾವಣೆ (2018 Karnataka Assembly Election), ಜನರ ತೀರ್ಪು, ನಂತರ ಅಧಿಕಾರದ ಗದ್ದುಗೆ ಏರಲು ಮೂರು ಪಕ್ಷಗಳು ನಡೆಸಿದ ರಾಜಕೀಯದ ಬಗ್ಗೆ ತಿಳಿದುಕೊಳ್ಳೋಣ.
ಅತಂತ್ರ ಪ್ರಜಾ ತೀರ್ಪು; ಯಾವ ಪಕ್ಷಕ್ಕೆ ಎಷ್ಟು ಸ್ಥಾನ?
2018ರ ಮೇ 12 ರಂದು ಒಂದೇ ಹಂತದಲ್ಲಿ 15ನೇ ವಿಧಾನಸಭೆಗೆ ಚುನಾವಣೆ ನಡೆದಿತ್ತು. ಮೇ 15 ರಂದು ಚುನಾವಣೆ ಫಲಿತಾಂಶ ಹೊರಬಿದ್ದಿತ್ತು. ಬಿಜೆಪಿ-104, ಕಾಂಗ್ರೆಸ್-80, ಜೆಡಿಎಸ್-37, ಕೆಪಿಜೆಪಿ-1, ಬಿಎಸ್ಪಿ-1, ಪಕ್ಷೇತರ-1 ಸ್ಥಾನ ಗೆದ್ದಿದ್ದವು. ವಿಧಾನಸಭೆಗೆ ಅತಂತ್ರ ಪ್ರಜಾ ತೀರ್ಪು ಹೊರಬಿದ್ದಿತ್ತು. 224 ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ 104 ಸ್ಥಾನಗಳನ್ನು ಗೆದ್ದು ಅತಿ ದೊಡ್ಡ ಪಕ್ಷವಾಗಿ ಮೂಡಿ ಬಂದ ಬಿಜೆಪಿ ಸ್ವತಂತ್ರ್ಯವಾಗಿ ಅಧಿಕಾರ ಹಿಡಿಯಲು ಸಾಧ್ಯವಾಗಲಿಲ್ಲ. ಅಂತೆಯೇ 2013ರಲ್ಲಿ ಸ್ಪಷ್ಟ ಬಹುಮತ ಪಡೆದು ಐದು ವರ್ಷ ಆಡಳಿತ ನಡೆಸಿದ್ದ ಕಾಂಗ್ರೆಸ್, 2018ರಲ್ಲಿ 80 ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿತು. ಇದರ ನಡುವೆ ಜೆಡಿಎಸ್ 37 ಸ್ಥಾನಗಳನ್ನು ಗಳಿಸಿತ್ತು. ಕರ್ನಾಟಕದಲ್ಲಿ ಬಿಎಸ್ಪಿ 1, ಕೆಪಿಜೆಪಿ 1 ಸ್ಥಾನವನ್ನು ಜಯಸಿದವು. ಜೊತೆಗೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ನಾಗೇಶ್ ಕೂಡ ವಿಧಾನಸಭೆಗೆ ಚುನಾಯಿತರಾದರು.
ಶೇಕಡವಾರು ಮತ ಗಳಿಕೆ ಎಷ್ಟು?
2018ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 1,27,44,325 ಮತಗಳನ್ನು ಪಡೆದಿತ್ತು. ಅಂತೆಯೇ ಕಾಂಗ್ರೆಸ್ 1,33,55,312 ಮತಗಳು ಹಾಗೂ ಜೆಡಿಎಸ್ 65,03,221 ಮತಗಳನ್ನು ಗಳಿಸಿತ್ತು. ಪಕ್ಷೇತರರಿಗೆ 13,80,242 ಮತಗಳು, ಬಿಎಸ್ಪಿಗೆ 1,06,940 ಮತಗಳು, ಎಂಇಪಿಗೆ 96,452 ಮತಗಳು ಹಾಗೂ ಕೆಪಿಜೆಪಿಗೆ 73,793 ಮತಗಳು ಬಂದಿದ್ದವು. ಇದನ್ನು ಶೇಕಡವಾರು ಪ್ರಮಾಣದಲ್ಲಿ ನೋಡುವುದಾದರೆ, ಬಿಜೆಪಿ ಶೇ. 36.2, ಕಾಂಗ್ರೆಸ್ ಶೇ. 38, ಜೆಡಿಎಸ್ ಶೇ. 18.3 ಹಾಗೂ ಇತರರು ಶೇ. 6.6 ಪ್ರಮಾಣದ ಮತಗಳನ್ನು ಪಡೆದಿದ್ದರು.
ಶೇಕಡವಾರು ಮತ ಗಳಿಕೆಯಲ್ಲಿ ಕಾಂಗ್ರೆಸ್ ಮೇಲುಗೈ
2018ರ ಚುನಾವಣೆಯಲ್ಲಿ ಕ್ಷೇತ್ರವಾರು ಗೆಲುವಿನಲ್ಲಿ 2ನೇ ಸ್ಥಾನದಲ್ಲಿದ್ದರೂ ಕಾಂಗ್ರೆಸ್ ಶೇಕಡವಾರು ಮತ ಗಳಿಕೆಯಲ್ಲಿ ನಂಬರ್ 1 ಸ್ಥಾನ ಪಡೆದುಕೊಂಡಿತ್ತು. ಚುನಾವಣೆಯಲ್ಲಿ ಅತಿ ಹೆಚ್ಚು ಸ್ಥಾನಗಳನ್ನು ಗಳಿಸಿದ್ದರೂ ಬಿಜೆಪಿ ಶೇಕಡವಾರು ಮತ ಗಳಿಕೆಯಲ್ಲಿ 2ನೇ ಸ್ಥಾನ ಪಡೆದಿತ್ತು ಎಂಬುದು ಇಲ್ಲಿ ಗಮನಾರ್ಹ
ಸೋಲುಂಡ ಘಟಾನುಘಟಿಗಳು
2018ರ ಚುನಾವಣೆಯಲ್ಲಿ ಅಚ್ಚರಿದಾಯಕವೆಂಬಂತೆ ಫಲಿತಾಂಶ ಹೊರಬಿದ್ದಿತ್ತು. ಆಗ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರ ಸಚಿವ ಸಂಪುಟದಲ್ಲಿ ಸ್ಥಾನ ಪಡೆದಿದ್ದ ಘಟಾನುಘಟಿಗಳೇ ಚುನಾವಣೆಯಲ್ಲಿ ಮಣ್ಣುಮುಕ್ಕಿದ್ದರು. ಆಗ ವಿಧಾನಸಭೆಯ ಸಭಾಧ್ಯಕ್ಷರಾಗಿದ್ದ ಕೆ.ಬಿ.ಕೋಳಿವಾಡ, ಲೋಕೋಪಯೋಗಿ ಸಚಿವರಾಗಿದ್ದ ಡಾ. ಹೆಚ್.ಸಿ.ಮಹದೇವಪ್ಪ, ಅರಣ್ಯ ಸಚಿವ ರಾಮಾನಾಥ ರೈ, ಕಾನೂನು ಸಚಿವ ಟಿ.ಬಿ.ಜಯಚಂದ್ರ, ಕಾರ್ಮಿಕ ಸಚಿವ ಸಂತೋಷ್ ಲಾಡ್, ಪಶು ಸಂಗೋಪನೆ ಸಚಿವ ಎ.ಮಂಜು, ಸಾರಿಗೆ ಸಚಿವ ಹೆಚ್.ಎಂ.ರೇವಣ್ಣ, ಸಮಾಜ ಕಲ್ಯಾಣ ಸಚಿವ ಹೆಚ್.ಆಂಜನೇಯ, ವೈದ್ಯಕೀಯ ಸಚಿವ ಶರಣಪ್ರಕಾಶ ಪಾಟೀಲ, ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ, ಭೂ ಮತ್ತು ಗಣಿ ಸಚಿವ ವಿನಯ ಕುಲಕರ್ಣಿ, ತೋಟಗಾರಿಕೆ ಸಚಿವ ಎಸ್.ಎಸ್.ಮಲ್ಲಿಕಾರ್ಜುನ, ಕಂದಾಯ ಸಚಿವ ಕಾಗೋಡು ತಿಮ್ಮಪ್ಪ, ಮೀನುಗಾರಿಕಾ ಸಚಿವ ಪ್ರಮೋದ್ ಮಧ್ವರಾಜ್, ಮುಜರಾಯಿ ಸಚಿವ ರುದ್ರಪ್ಪ ಲಮಾಣಿ, ಕನ್ನಡ ಮತ್ತು ಸಂಸ್ಕೃತಿ ಸಚಿವೆ ಉಮಾಶ್ರೀ, ಸಣ್ಣ ಕೈಗಾರಿಕಾ ಸಚಿವರಾಗಿದ್ದ ಮೋಹನಕುಮಾರಿ ಅವರು ಸೋಲನುಭವಿಸಿದ್ದರು.