ನವದೆಹಲಿ: ಲೋಕಸಭಾ ಚುನಾವಣೆ (Lok Sabha Election) ಹಿನ್ನೆಲೆ ಒಂದು ಕಡೆ ಪ್ರಧಾನಿ ಮೋದಿ (Narendra Modi) ಅಬ್ಬರದ ಪ್ರಚಾರ ಶುರುಮಾಡಿದ್ದರೆ ಮತ್ತೊಂದೆಡೆ ರಾಷ್ಟ್ರರಾಜಧಾನಿಯಲ್ಲಿ ವಿಪಕ್ಷಗಳು ಒಗ್ಗಟ್ಟು ಪ್ರದರ್ಶನಕ್ಕೆ ಮುಂದಾಗಿದೆ.
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Arvind Kejriwal) ಅವರ ಬಂಧನ ಖಂಡಿಸಿ ‘ಲೋಕತಂತ್ರ ಬಚಾವೋ’ ಹೆಸರಿನಲ್ಲಿ ಇಂಡಿಯಾ ಒಕ್ಕೂಟ ಬೃಹತ್ ಸಮಾವೇಶ ಹಾಗೂ ರ್ಯಾಲಿ ನಡೆಸಲಿದೆ. ಪ್ರತಿಭಟನಾ ಸಮಾವೇಶದಲ್ಲಿ ಕಾಂಗ್ರೆಸ್ ಸೇರಿ 28 ವಿಪಕ್ಷಗಳ ನಾಯಕರು ಭಾಗಿಯಾಗುವ ಸಾಧ್ಯತೆಯಿದೆ.
ಬೃಹತ್ ಸಮಾವೇಶದಲ್ಲಿ ಪಾಲ್ಗೊಂಡು ನಾಯಕರು ಕೇಂದ್ರ ಸರ್ಕಾರ, ಇಡಿ, ಐಟಿ, ಸಿಬಿಐ ವಿರುದ್ಧ ವಾಗ್ದಾಳಿ ನಡೆಸಲಿದ್ದಾರೆ. ಅಲ್ಲದೇ ಪ್ರತಿಭಟನೆ ಮೂಲಕ ಮೋದಿ ಸರ್ಕಾರದ ವಿರುದ್ಧ ಒಗ್ಗಟ್ಟು ಪ್ರದರ್ಶನ ಮಾಡಲಿದ್ದಾರೆ. ಈ ಸಮಾವೇಶದಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಸೇರಿದಂತೆ ಇತರೆ ನಾಯಕರು ಪಾಲ್ಗೊಳ್ಳಲಿದ್ದಾರೆ ಎಂದು ವರದಿಗಳು ತಿಳಿಸಿವೆ.
ಬೃಹತ್ ಸಮಾವೇಶದ ಹಿನ್ನೆಲೆ ಮೈದಾನದ ಪ್ರತಿ ಗೇಟ್ನಲ್ಲಿ ತಪಾಸಣೆ ನಡೆಸಲಾಗಿದೆ ಮತ್ತು ಸುತ್ತಮುತ್ತ ಅರೆಸೇನಾಪಡೆಯ ಸಿಬ್ಬಂದಿಯನ್ನು ನಿಯೋಜಿಸುವುದರೊಂದಿಗೆ ವಿಸ್ತಾರವಾದ ವ್ಯವಸ್ಥೆಗಳನ್ನು ಮಾಡಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ. ಅಲ್ಲದೇ ಕೆಲವು ಷರತ್ತುಗಳೊಂದಿಗೆ ರ್ಯಾಲಿಯನ್ನು ನಡೆಸಲು ಪೊಲೀಸರು ಅನುಮತಿಸಿದ್ದಾರೆ.
ಹೆಚ್ಚುವರಿಯಾಗಿ ರಾಜಕೀಯ ಪಕ್ಷಗಳ ಕಚೇರಿಗಳು ಇರುವ ಡಿಡಿಯು ಮಾರ್ಗದಲ್ಲಿ ಸೆಕ್ಷನ್ 144 ವಿಧಿಸಲಾಗುವುದು. ರಾಮಲೀಲಾ ಮೈದಾನದಿಂದ ಮೆರವಣಿಗೆಗೆ ಅವಕಾಶ ನೀಡುವುದಿಲ್ಲ, ಯಾವುದೇ ಉಲ್ಲಂಘನೆಗಳು ನಡೆದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.