ಬೆಳಗಾವಿ: ಚುನಾವಣೆಗೆ ಇನ್ನೇನು ಕೆಲವೇ ತಿಂಗಳು ಬಾಕಿ ಉಳಿದಿದೆ. ಮತದಾರರನ್ನು ಸೆಳೆದುಕೊಳ್ಳಲು ಪ್ರತಿಯೊಂದು ಪಕ್ಷಗಳು ಬೃಹತ್ ಸಮಾವೇಶಗಳನ್ನು ನಡೆಸುತ್ತಿವೆ. ಇದರ ಬೆನ್ನಲ್ಲೇ ಪ್ರಜಾಧ್ವನಿ ಯಾತ್ರೆ ಬಸ್ಸಿನಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಆಡಿದ ಮಾತಿನ ವೀಡಿಯೋ ವೈರಲ್ ಆಗಿದೆ. ಹೌದು ಪ್ರತಿಯೊಬ್ಬರಿಗೆ 500 ರೂಪಾಯಿ ಕೊಟ್ಟು ಕರ್ಕೊಂಡು ಬರಬೇಕು ಅಂತಾ ಪ್ರಜಾಧ್ವನಿ ಯಾತ್ರೆ ಬಸ್ಸಿನಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿರೋ ವಿಡಿಯೋ ವೈರಲ್ ಆಗಿದೆ.
ದುಡ್ಡು ಕೊಟ್ಟು ಜನರನ್ನು ಕರೆದು ತರುವುದು, ಅವರಿಗೆಲ್ಲ ಬಿಟ್ಟಿ ಬಿಟ್ಟಿ ಭಾಗ್ಯ ಘೋಷಣೆ ಮಾಡುವುದು. ಆ ಕಡೆ ಅದೂ ಇಲ್ಲ, ಈ ಕಡೆ ಇದೂ ಇಲ್ಲ. ಕಾಂಗ್ರೆಸ್ ಕಥೆ ಈಗ ಮುಂಡಾಸು ಇಲ್ಲದಿರೋ ಮದುಮಗನ ಥರ ಆಗಿದೆ.#CorruptCongress pic.twitter.com/aHp6ISBADG
ಬೆಳಗಾವಿಯ ಪಂತ ಬಾಳೇಕುಂದ್ರಿ ಗ್ರಾಮದಲ್ಲಿ ಕಾಂಗ್ರೆಸ್ ಪ್ರಜಾಧ್ವನಿ ಯಾತ್ರೆ (Congress Prajadwani Yatra) ಯ ಸಮಾವೇಶ ಮುಗಿಸಿ ಬಸ್ಸಿನಲ್ಲಿ ಸಿದ್ದರಾಮಯ್ಯ, ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ (Satish Jarakiholi), ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ (Laxmi Hebbalkar), ಎಂಎಲ್ಸಿ ಚೆನ್ನರಾಜ ಹಟ್ಟಿಹೊಳಿ ಸೇರಿದಂತೆ ಇತರ ನಾಯಕರು ವಾಪಸ್ ಬರುತ್ತಿದ್ದರು. ನೀವಿಬ್ಬರು ಸಮಾವೇಶಕ್ಕೆ ಬರಬೇಕು ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಆಹ್ವಾನ ನೀಡಿದರು. ಚುನಾವಣೆ ಇರೋದ್ರಿಂದ ಅವರು ಜನರನ್ನು ಸೇರಿಸುತ್ತಾರೆ ಎಂದು ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದರು.
ಈ ವೇಳೆ ಪ್ರತಿಯೊಬ್ಬರನ್ನು 500 ರೂಪಾಯಿ ಕೊಟ್ಟು ಕರೆದುಕೊಂಡು ಬರಬೇಕು ಎಂದು ಸಿದ್ದರಾಮಯ್ಯ ಹೇಳಿದ 20 ಸೆಕೆಂಡ್ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಜನರನ್ನು ಸೇರಿಸಲು 500 ರೂ. ಕೊಡಬೇಕು ಎಂದಿರುವ ಸಿದ್ದರಾಮಯ್ಯ, ವಿಪಕ್ಷಗಳನ್ನು ಉದ್ದೇಶಿಸಿ ಮಾತನಾಡಿದ್ದಾರಾ? ಅಥವಾ ತಾವು ನಡೆಸುವ ಸಮಾವೇಶ ಬಗ್ಗೆ ಮಾತನಾಡಿದ್ದಾರಾ ಎಂಬ ಬಗ್ಗೆ ಅಸ್ಪಷ್ಟವಾಗಿದೆ. ಸದ್ಯ ಈ ವೀಡಿಯೋವನ್ನು ಬಿಜೆಪಿ (BJP) ಕರ್ನಾಟಕ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಶೇರ್ ಮಾಡಿಕೊಂಡು ಕಿಡಿಕಾರಿದೆ.