ಬೆಳಗ್ಗಿನ ಉಪಾಹಾರವನ್ನು ಹಲವರು ತಪ್ಪಿಸುವ ಅಭ್ಯಾಸ ಹೊಂದಿರುತ್ತಾರೆ. ಆದರೆ ಇದು ಆರೋಗ್ಯಕರವಲ್ಲ. ಆದ್ದರಿಂದ ನಿತ್ಯ ಬೆಳಗ್ಗೆ ಉತ್ತಮ ಆಹಾರ ಸೇವನೆಯ ಅಭ್ಯಾಸವನ್ನು ರೂಢಿಸಿಕೊಳ್ಳಬೇಕು. ಬೆಳಗಿನ ಹೊತ್ತು ಉಪಹಾರ (ಬ್ರೇಕ್ ಫಾಸ್ಟ್) ಸೇವಿಸಿದಿದ್ದರೆ ಮುಂದೆ ಏನೆಲ್ಲಾ ತೊಂದರೆಗಳನ್ನು ಎದುರಿಸ ಬೇಕಾಗುತ್ತದೆ ಗೊತ್ತಾ? ಇಲ್ಲಿದೆ ನೋಡಿ.
ಹೃದಯಾಘಾತದ ಸಾಧ್ಯತೆ
ಜಾಮಾ ಅಧ್ಯಯನದ ಪ್ರಕಾರ, ಬೆಳಗಿನ ಉಪಹಾರವನ್ನು ತ್ಯಜಿಸುವ ಪುರುಷರಲ್ಲಿ ಹೃದಯಾಘಾತದ ಸಾಧ್ಯತೆ ಶೇ.27ಕ್ಕಿಂತ ಹೆಚ್ಚಿರುತ್ತದೆ. ಈ ಸಂಶೋಧನೆಯ ನೇತೃತ್ವ ವಹಿಸಿದ್ದ ಡಾ. ಲೇಹ್ ಕಾಹಿಲ್, ನೀವು ಆರೋಗ್ಯಕರವಾದ ಉಪಹಾರ ಸೇವಿಸಿದರೆ ಹೃದಯಾಘಾತದ ಅಪಾಯ ತಡೆಯಬಹುದು.
ಬೆಳಗಿನ ಉಪಾಹಾರವನ್ನು ತ್ಯಜಿಸಿದರೆ ಜನರು ಅಧಿಕ ರಕ್ತದೊತ್ತಡಕ್ಕೆ ತುತ್ತಾಗುವ ಸಾಧ್ಯತೆ ಇರುತ್ತದೆ. ಇದು ಅಪಧಮನಿಗಳ ಅಡಚಣೆಗೆ ಕಾರಣವಾಗುತ್ತದೆ. ಮತ್ತೊಂದೆಡೆ, ಪಾರ್ಶ್ವ ವಾಯು ಸೇರಿದಂತೆ ಇತರ ಹೃದಯ ಕಾಯಿಲೆಗಳ ಅಪಾಯವನ್ನು ಹೆಚ್ಚು ಮಾಡುತ್ತದೆ ಎಂಬ ಅಂಶವನ್ನು ಬಹಿರಂಗಪಡಿಸಿದ್ದಾರೆ.
ಮಹಿಳೆಯರಿಗೆ ಟೈಪ್ -2 ಮಧುಮೇಹ
ಆಹಾರ ಪದ್ಧತಿ ಮತ್ತು ಆರೋಗ್ಯದ ನಡುವಿನ ಸಂಬಂಧ ಕಂಡುಹಿಡಿಯಲು ಹಾರ್ವರ್ಡ್ ಯೂನಿವರ್ಸಿಟಿ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್ ಒಂದು ಅಧ್ಯಯನವನ್ನು ನಡೆಸಿತು. ಸುಮಾರು ಆರು ವರ್ಷಗಳ ಕಾಲ ನಡೆಸಿದ ಈ ಸಂಶೋಧನೆಯಲ್ಲಿ 46,289 ಮಹಿಳೆಯರು ಭಾಗವಹಿಸಿದ್ದರು. ಆ ನಂತರ ಬಂದ ಅಧ್ಯಯನದ ಫಲಿತಾಂಶಗಳು ಅದ್ಭುತವಾಗಿದ್ದವು. ಅಂದರೆ ಫಲಿತಾಂಶದ ಪ್ರಕಾರ,
ಉಪಹಾರವನ್ನು ಸೇವಿಸುವ ಮಹಿಳೆಯರಿಗಿಂತ, ಉಪಹಾರವನ್ನು ತ್ಯಜಿಸುವ ಅಭ್ಯಾಸವನ್ನು ಹೊಂದಿರುವ ಮಹಿಳೆಯರಿಗೆ ಟೈಪ್ -2 ಮಧುಮೇಹ ಬರುವ ಅಪಾಯ ಹೆಚ್ಚಿತ್ತು. ಬೆಳಗ್ಗೆ ತಿಂಡಿ ತಿನ್ನುವುದನ್ನು ಬಿಟ್ಟು ಕೆಲಸಕ್ಕೆ ಹೊರಡುವ ವರ್ಕಿಂಗ್ ವುಮನ್ಸ್ ಗೆ ಟೈಪ್ 2 ಮಧುಮೇಹ ಬರುವ ಸಾಧ್ಯತೆ ಶೇ.54 ಕ್ಕಿಂತ ಹೆಚ್ಚಿರುತ್ತದೆ.
ತೂಕ ಹೆಚ್ಚಾಗುತ್ತದೆ
ನೀವು ಒಂದು ಕಡೆ ತೂಕ ಇಳಿಸುವ ಪ್ಲಾನ್ ಮಾಡಿಕೊಂಡು, ಮತ್ತೊಂದೆಡೆ ಬೆಳಗಿನ ಉಪಹಾರ ತ್ಯಜಿಸುವ ಅಭ್ಯಾಸ ಹೊಂದಿದ್ದರೆ ನಿಮ್ಮ ಆರೋಗ್ಯದ ಕಥೆ ಏನಾಗಬಹುದು ಎಂದು ಊಹಿಸಿದ್ದೀರಾ?. ಬೆಳಗಿನ ಸಮಯದಲ್ಲಿ ಉಪಹಾರವನ್ನು ಸೇವಿಸದಿರುವವರ ಕುರಿತು ನಡೆಸಿದ ಅಧ್ಯಯನಗಳ ಪ್ರಕಾರ,
ಬೆಳಗ್ಗೆ ತಿಂಡಿ ತಿನ್ನದವರು ಕ್ರಮೇಣ ತೂಕವನ್ನು ಹೆಚ್ಚಿಸಿಕೊಂಡಿದ್ದರು. ಹಸಿವಿನ ಮಟ್ಟ ಹೆಚ್ಚಾದಷ್ಟೂ ಆಹಾರ ಸೇವನೆಯ ಪ್ರಮಾಣ ಹೆಚ್ಚಾಗುತ್ತದೆ. ತಿಂಡಿ ತ್ಯಜಿಸುವ ನಿರಂತರ ಅಭ್ಯಾಸವು ಅಂತಿಮವಾಗಿ ತೂಕ ಹೆಚ್ಚಾಗಲು ಕಾರಣವಾಗುತ್ತದೆ ಹೊರತು ತೂಕ ನಷ್ಟಕ್ಕೆ ಕಾರಣವಾಗುವುದಿಲ್ಲ ಎನ್ನುವುದನ್ನು ಮರೆಯಬೇಡಿ.