ಬೆಂಗಳೂರು/ ತುಮಕೂರು: ಏಪ್ರಿಲ್ 1 ರಂದು (ಸೋಮವಾರ) ಲಕ್ಷಾಂತರ ಮಕ್ಕಳಿಗೆ ಆಶ್ರಯ, ಅನ್ನ ,ಅಕ್ಷರ ನೀಡಿದ ನಡೆದಾಡುವ ದೇವರು ಎಂದೇ ಪ್ರಸಿದ್ದವಾಗಿದ್ದ ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿ ಅವರ ಜನ್ಮದಿನ.
ಶಿವಕುಮಾರ ಸ್ವಾಮೀಜಿಗಳ ಹಿನ್ನೆಲೆ
ಶಿವಕುಮಾರ ಸ್ವಾಮೀಜಿ ಅವರು ಮಾಗಡಿ ತಾಲೂಕಿನ ವೀರಾಪುರದಲ್ಲಿ ಏಪ್ರಿಲ್ 1, 1907ರಲ್ಲಿ ಜನಿಸಿದ್ದರು. 1922ರಲ್ಲಿ ವಿದ್ಯಾರ್ಥಿಯಾಗಿ ತುಮಕೂರಿನ ಮಠಕ್ಕೆ ಸೇರಿದರು. 1927ರಲ್ಲಿ ಆಗಿನ ಸಿದ್ದಗಂಗಾ ಮಠಾಧಿಪತಿಗಳಾದ ಶ್ರೀ ಶ್ರೀ ಶ್ರೀ ಉದ್ದಾನ ಶಿವಯೋಗಿಗಳವರೊಡನಾಟ ಹೊಂದಿದ್ದರು. ಉನ್ನತ ಶಿಕ್ಷಣ ಮುಗಿಸಿದ ಬಳಿಕ ಶ್ರೀಗಳು 1930ರ ಮಾರ್ಚ್ 3ರಂದು ಮಠದ ಸಂಪೂರ್ಣ ಜವಾಬ್ದಾರಿಯನ್ನು ವಹಿಸಿಕೊಂಡರು.
ಮನೆ ಮನೆ ಭಿನ್ನಹ ಮಾಡಿ ಮಠವನ್ನು ನಿರ್ವಹಿಸಿದರು
ಮಠದ ಜವಾಬ್ದಾರಿ ವಹಿಸಿಕೊಂಡ ಸಂದರ್ಭದಲ್ಲಿ ಮಠದ ಆದಾಯ ತುಂಬಾ ಕಡಿಮೆ ಇತ್ತು. ಮಠಕ್ಕೆಂದು ಮೀಸಲಾಗಿದ್ದ ಜಮೀನಿನಲ್ಲಿ ಬೆಳೆದು ವಿದ್ಯಾರ್ಥಿಗಳ ಸನಿವಾಸ ಶಿಕ್ಷಣ ಸಂಸ್ಥೆಗಳನ್ನು ನಡೆಸುವುದು ಕಷ್ಟದಾಯಕವಾಗಿತ್ತು. ಮಠದ ಭೂಮಿಯೆಲ್ಲ ಮಳೆಯಾಧಾರಿತವಾದದ್ದು ಮತ್ತೂ ತೊಡಕಾಗಿ ಅತಿವೃಷ್ಟಿ, ಅನಾವೃಷ್ಟಿಗಳಂತಹ ಸಮಯದಲ್ಲಿ ಬಹಳ ಕಷ್ಟವಾಗುತ್ತಿತ್ತು. ಇದನ್ನೆಲ್ಲಾ ಧೈರ್ಯವಾಗಿ ಮೆಟ್ಟಿ ನಿಂತ ಶ್ರೀಗಳು ಭಕ್ತರ ಮನೆಗೆ ಭಿನ್ನಹವೇ ಮೊದಲಾದ ಆದ್ಯತೆಗಳ ಮೇರೆಗೆ ನಡೆದುಕೊಂಡೇ ಹೋಗಿ ಅಲ್ಲಿಂದ ಧವಸ ಧಾನ್ಯಗಳನ್ನು ತಂದು ಮಠವನ್ನು ನಿರ್ವಹಿಸಿದರು. ಹೀಗೆ ಸುಮಾರು 89 ವರ್ಷಗಳ ಕಾಲ ಮಠವನ್ನು ನಡೆಸಿಕೊಂಡು ಬಂದಿದ್ದರು. 2019 ಜ.1 ರಂದು ತಮ್ಮ 112ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದರು.
ಶಿವಕುಮಾರ ಸ್ವಾಮೀಜಿಗಳಿಗೆ ಸಂದ ಪ್ರಶಸ್ತಿ ಮತ್ತು ಸನ್ಮಾನಗಳು
- ಶಿವಕುಮಾರ ಸ್ವಾಮೀಜಿಯವರ ಶಿಕ್ಷಣ ಸೇವೆಯನ್ನು ಪರಿಗಣಿಸಿ ಕರ್ನಾಟಕ ವಿಶ್ವವಿದ್ಯಾಲಯವು ಶ್ರೀಗಳಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ.
- ಕರ್ನಾಟಕ ಸುವರ್ಣ ಮಹೋತ್ಸವ ಸಮಯದಲ್ಲಿ ಶ್ರೀಗಳ ಜೀವಮಾನ ಸಮಾಜ ಸೇವೆಯನ್ನು ಪರಿಗಣಿಸಿ ಕರ್ನಾಟಕ ಸರ್ಕಾರ ರಾಜ್ಯದ ಮಹೋನ್ನತ ಪ್ರಶಸ್ತಿಯಾದ ಕರ್ನಾಟಕ ರತ್ನ ಪ್ರಶಸ್ತಿಯನ್ನು ಶ್ರೀಗಳಿಗೆ ನೀಡಿ ಗೌರವಿಸಿದೆ.
- ಭಾರತ ಸರ್ಕಾರ 2015ರಲ್ಲಿ ಶ್ರೀಗಳಿಗೆ ಪದ್ಮಭೂಷಣ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.