ಪ್ರಧಾನಿ ನರೇಂದ್ರ ಮೋದಿಯವರಿಗೆ ಮೂರನೇ ಅವಧಿಗೆ ತಮ್ಮ ಬೆಂಬಲವನ್ನು ವ್ಯಕ್ತಪಡಿಸಲು ಮತ್ತು 400ರ ನಿರ್ಣಾಯಕ ಜನಾದೇಶವನ್ನು ನೀಡುವಂತೆ ಭಾರತದ ಜನರನ್ನು ಒತ್ತಾಯಿಸಲು ಅಮೆರಿಕದಲ್ಲಿರುವ ಬಿಜೆಪಿಯ ಸಾಗರೋತ್ತರ ಸ್ನೇಹಿತರು ಅಲ್ಲಿನ 20 ವಿವಿಧ ನಗರಗಳಲ್ಲಿ ಕಾರ್ ರ್ಯಾಲಿಯನ್ನು ಆಯೋಜಿಸಿದ್ದರು.
ಮೋದಿ ನೇತೃತ್ವದ ಬಿಜೆಪಿ ಮತ್ತು ಎನ್ಡಿಎ ಒಕ್ಕೂಟ 400 ಸ್ಥಾನಗಳನ್ನು ದಾಟುವುದನ್ನು ನೋಡಲು ಭಾರತೀಯ ಅಮೆರಿಕನ್ ಸಮುದಾಯವು ಅತ್ಯಂತ ಉತ್ಸಾಹದಿಂದ ಕಾಯುತ್ತಿದೆ ಎಂದು OFBJP-USA ಸಂಘಟನೆಯ ಅಧ್ಯಕ್ಷ ಅಡಪ ಪ್ರಸಾದ್ ಹೇಳಿದ್ದಾರೆ.
ಪೂರ್ವ ಕರಾವಳಿಯಿಂದ ಪಶ್ಚಿಮ ಕರಾವಳಿಗೆ ಮತ್ತು ಉತ್ತರದಿಂದ ದಕ್ಷಿಣಕ್ಕೆ ಸುಮಾರು 20 ನಗರಗಳಲ್ಲಿ ಸಂಘಟಿತ ರೀತಿಯಲ್ಲಿ ಓಎಫ್ ಬಿಜೆಪಿ ಆಯೋಜಿಸಿದ ಕಾರ್ ರ್ಯಾಲಿಗಳಲ್ಲಿ ಸಮುದಾಯವು ಉತ್ಸಾಹದಿಂದ ಭಾಗವಹಿಸಿದೆ ಎಂದು OFBJP-USA ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವಾಸುದೇವ್ ಪಟೇಲ್ ತಿಳಿಸಿದರು.
ವಾಷಿಂಗ್ಟನ್ ಡಿಸಿ ಮೆಟ್ರೋ ಪ್ರದೇಶದಲ್ಲಿ, ವರ್ಜೀನಿಯಾ ಮತ್ತು ಮೇರಿಲ್ಯಾಂಡ್ ನಲ್ಲಿ ರ್ಯಾಲಿಗಳನ್ನು ನಡೆಸಲಾಯಿತು. ನ್ಯೂಜೆರ್ಸಿಯಲ್ಲಿ ಸುಮಾರು 200 ಕಾರುಗಳು ರ್ಯಾಲಿಯಲ್ಲಿ ಭಾಗವಹಿಸಿದ್ದವು.
ಆಸ್ಟಿನ್, ಡಫ್ಲಸ್, ಚಿಕಾಗೋ, ರೇಲಿ ಮತ್ತು ಡೆಟ್ರಾಯಿಟ್ನಂತಹ ನಗರಗಳಲ್ಲಿ ಇದೇ ರೀತಿಯ ಕಾರ್ ರ್ಯಾಲಿಗಳನ್ನು ನಡೆಸಲಾಯಿತು. ಈ ರ್ಯಾಲಿಗಳಲ್ಲಿ ಕಾರುಗಳು ಬಿಜೆಪಿ ಧ್ವಜಗಳು ಮತ್ತು ಅಮೇರಿಕನ್ ಧ್ವಜಗಳಿಂದ ಅಲಂಕರಿಸಲ್ಪಟ್ಟವು ಮತ್ತು ಮೋದಿ ಕಾ ಗ್ಯಾರಂಟಿ, ಭಾರತವು 3 ನೇ ಅತಿದೊಡ್ಡ ಆರ್ಥಿಕತೆ ಎಂಬ ಫಲಕಗಳನ್ನು ರ್ಯಾಲಿಯ್ಲಿ ಪ್ರದರ್ಶಿಸಿತು.