ಹೈದರಾಬಾದ್: ಹಠಾತ್ ಹೃದಯಾಘಾತಕ್ಕೆ ಸಂಬಂಧಿಸಿದಂತೆ ಮತ್ತೋರ್ವ ವ್ಯಕ್ತಿ ಸಾವನ್ನಪ್ಪಿರುವ ಘಟನೆ ಹೈದರಾಬಾದ್ನಲ್ಲಿ (Hyderabad) ನಡೆದಿದೆ.
38 ವರ್ಷದ ಪರಮೇಶ್ ಯಾದವ್ ಅಲಿಯಾಸ್ ಶ್ಯಾಮ್ ಯಾದವ್ ಹೃದಯಾಘಾತದಿಂದ (Heart attack) ಮೃತಪಟ್ಟ ವ್ಯಕ್ತಿ. ಮಂಗಳವಾರ ತಡರಾತ್ರಿ ನಗರದ ಲಾಲಾಪೇಟ್ ಪ್ರದೇಶದ ಪ್ರೊ.ಜಯಶಂಕರ್ ಇಂಡೋರ್ ಕ್ರೀಡಾಂಗಣದಲ್ಲಿ ಬ್ಯಾಡ್ಮಿಂಟನ್ (Badminton) ಆಡುತ್ತಿದ್ದ ಸಂದರ್ಭ ಇದ್ದಕ್ಕಿದ್ದಂತೆ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ.
ಖಾಸಗಿ ಉದ್ಯೋಗಿಯಾಗಿದ್ದ ಅವರು ಖಾಯಂ ಆಗಿ ಬ್ಯಾಡ್ಮಿಂಟನ್ ಆಡಲು ಕ್ರೀಡಾಂಗಣಕ್ಕೆ ಬರುತ್ತಿದ್ದರು. ಕುಸಿದು ಬಿದ್ದ ತಕ್ಷಣವೇ ಅವರನ್ನು ಗಾಂಧಿ ಆಸ್ಪತ್ರೆಗೆ ಸೇರಿಸಲಾಯಿತಾದರೂ ಅಷ್ಟು ಹೊತ್ತಿಗಾಗಲೇ ಅವರ ಉಸಿರು ನಿಂತು ಹೋಗಿತ್ತು.
ಘಟನೆಯ ಬಗ್ಗೆ ಲಾಲಾಗುಡ ಪೊಲೀಸರಿಗೆ ಮಾಹಿತಿ ನೀಡಲಾಯಿತು. ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ ಪೊಲೀಸರು ಶ್ಯಾಮ್ ಯಾದವ್ ಅವರನ್ನು ಆಸ್ಪತ್ರೆಗೆ ಸ್ಥಳಾಂತರಿಸಿದರು. ಈ ಕುರಿತು ಯಾವುದೇ ಪ್ರಕರಣ ದಾಖಲಾಗಿಲ್ಲ. ಕಳೆದ 8 ದಿನಗಳಲ್ಲಿ ಸಂಭವಿಸಿದ ಹಠಾತ್ ಹೃದಯಾಘಾತ ಪ್ರಕರಣಗಳಲ್ಲಿ ಇದು ನಾಲ್ಕನೇ ಘಟನೆ ಎಂದು ವರದಿಯಾಗಿದೆ.
ಇದಕ್ಕೂ ಮೊದಲು, 19 ವರ್ಷದ ಯುವಕ ತನ್ನ ಸಂಬಂಧಿಕರ ಮದುವೆಯಲ್ಲಿ ಡ್ಯಾನ್ಸ್ ಮಾಡುತ್ತಿದ್ದ ಸಂದರ್ಭ ಕುಸಿದು ಬಿದ್ದು ಸಾವನ್ನಪ್ಪಿದ ಘಟನೆ ಫೆಬ್ರವರಿ 27ರಂದು ನಿರ್ಮಲ್ ಜಿಲ್ಲೆಯ ಪಾರ್ಡಿ ಗ್ರಾಮದಲ್ಲಿ ನಡೆದಿದೆ. ಫೆಬ್ರವರಿ 23ರಂದು 24 ವರ್ಷದ ಪೊಲೀಸ್ ಪೇದೆಯೊಬ್ಬ ಹೈದರಾಬಾದ್ನಲ್ಲಿ ಜಿಮ್ ಮಾಡುತ್ತಿದ್ದ ಸಂದರ್ಭ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ.
ಈ ತರಹದ ಪ್ರಕರಣವು ಇತ್ತೀಚಿಗೆ ನಗರದ ಕಲಾಪತ್ಥರ್ನಲ್ಲಿ ಫೆಬ್ರವರಿ 20ರಂದು ವರದಿಯಾಗಿದೆ. ಈ ಪ್ರಕರಣದಲ್ಲಿ ಮಧ್ಯವಯಸ್ಕ ವ್ಯಕ್ತಿಯೊಬ್ಬರು ವರನಿಗೆ ಅರಶಿಣ ಹಚ್ಚುವ ಸಂದರ್ಭ ಹಠಾತ್ ಕುಸಿದು ಬಿದ್ದು ಸಾವನ್ನಪಿದ್ದಾರೆ.