ವಿಶ್ವಸಂಸ್ಥೆ: ಆಫ್ರಿಕಾ ಮತ್ತು ಏಷ್ಯಾದಲ್ಲಿ ನಿರ್ದಿಷ್ಟವಾಗಿ ಕೆಲವು ರಾಷ್ಟ್ರಗಳು ಭಯೋತ್ಪಾದನೆ ಹರಡುತ್ತಿರುವ ಬಗ್ಗೆ ಭಾರತವು ವಿಶ್ವಸಂಸ್ಥೆಯಲ್ಲಿ ಕಳವಳ ವ್ಯಕ್ತಪಡಿಸಿದೆ.
ಪರೋಕ್ಷವಾಗಿ ಪಾಕಿಸ್ತಾನ ಹೆಸರು ಉಲ್ಲೇಖಿಸಿ, ಭಯೋತ್ಪಾದಕರಿಗೆ ಆಶ್ರಯ ಕೊಡುವ ದೇಶವು ಅದರ ಕೃತ್ಯಗಳಿಗೆ ತಕ್ಕ ಬೆಲೆ ತೆರಬೇಕು ಎಂದು ಎಚ್ಚರಿಕೆ ನೀಡಿದೆ
ಭಯೋತ್ಪಾದನೆ ಪ್ರಾಯೋಜಿಸುವ ದೇಶವನ್ನು ಅದರ ಕೃತ್ಯಗಳಿಗೆ ವಿಶ್ವ ಸಮುದಾಯವು ಹೊಣೆ ಮಾಡಬೇಕು. ಭಾರತವು ಎಲ್ಲ ಬಗೆಯ ಭಯೋತ್ಪಾದನೆಯನ್ನು ಬಲವಾಗಿ ಖಂಡಿಸುತ್ತದೆ ಎಂದು ವಿಶ್ವಸಂಸ್ಥೆಯ ಭಾರತದ ಕಾಯಂ ಪ್ರತಿನಿಧಿ ರುಚಿರಾ ಕಾಂಬೊಜ್ ಪ್ರತಿಪಾದಿಸಿದ್ದಾರೆ.
ಭಯೋತ್ಪಾದನೆ ನಿಗ್ರಹ ಸಂಬಂಧ ಸದಸ್ಯ ರಾಷ್ಟ್ರಗಳ ರಾಯಭಾರಿಗಳ ಮಟ್ಟದ ತ್ರೈಮಾಸಿಕ ಸಭೆಗೆ ಹೇಳಿಕೆ ಬಿಡುಗಡೆ ಮಾಡಿರುವ ಅವರು, ‘ಭಯೋತ್ಪಾದನೆಯ ಬೆದರಿಕೆ ಗಂಭೀರ ವಿಷಯವೆನ್ನುವುದು ನಿಜ. ಅಂತರರಾಷ್ಟ್ರೀಯ ಸಹಕಾರ, ಒಗ್ಗಟ್ಟಿನ ಪ್ರಯತ್ನಗಳ ನಡುವೆಯೂ ಭಯೋತ್ಪಾದನೆ ವಿಶೇಷವಾಗಿ ಆಫ್ರಿಕಾ ಮತ್ತು ಏಷ್ಯಾದ ರಾಷ್ಟ್ರಗಳಲ್ಲಿ ಹರಡುತ್ತಲೇ ಇದೆ. ಇದು ತೀರಾ ವಿಷಾದನೀಯ’ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.