ನವದೆಹಲಿ: ತೃಣಮೂಲ ಕಾಂಗ್ರೆಸ್ ನಾಯಕಿ ಮಹುವಾ ಮೊಯಿತ್ರಾ ವಿರುದ್ಧ ಜಾರಿ ನಿರ್ದೇಶನಾಲಯ (Enforcement Directorate) ಅಕ್ರಮ ಹಣ ವರ್ಗಾವಣೆ ಕೇಸ್ (Money Laundering Case) ದಾಖಲಿಸಿದೆ. ಮಹುವಾ ಮೊಯಿತ್ರಾ ವಿರುದ್ಧ ಸಿಬಿಐ (CBI) ದಾಖಲಿಸಿದ ಎಫ್ಐಆರ್ ಆಧರಿಸಿ, ಪ್ರಕರಣ ದಾಖಲಿಸಲಾಗಿದೆ.
ವಿಚಾರಣೆಗಾಗಿ ತನ್ನ ದೆಹಲಿ ಕಚೇರಿಗೆ ಹಾಜರಾಗುವಂತೆ ನೀಡಿದ್ದ ಏಜೆನ್ಸಿಯ ಸಮನ್ಸ್ ಅನ್ನು ಮಹುವಾ ಮೊಯಿತ್ರಾ ತಪ್ಪಿಸಿಕೊಂಡ ಹಿನ್ನೆಲೆಯಲ್ಲಿ ಇ.ಡಿ ಈ ಕ್ರಮ ಕೈಗೊಂಡಿದೆ ಎನ್ನಲಾಗಿದೆ. ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (FEMA) ಉಲ್ಲಂಘನೆ ಪ್ರಕರಣದಲ್ಲಿ ವಿಚಾರಣೆಗಾಗಿ ಮೊಯಿತ್ರಾ ಮತ್ತು ಉದ್ಯಮಿ ದರ್ಶನ್ ಹಿರಾನಂದಾನಿ ಅವರಿಗೆ ಇಡಿ ಸಮನ್ಸ್ ನೀಡಿತ್ತು. ಈ ಸಮನ್ಸ್ ಅನ್ನು ಮೊಯಿತ್ರ ನಿರಾಕರಿಸಿದ್ದರು ಎಂದು ಹೇಳಲಾಗಿದೆ.
ಏನಿದು ಕೇಸ್?
ಬಿಜೆಪಿ ಲೋಕಸಭಾ ಸದಸ್ಯ ನಿಶಿಕಾಂತ್ ದುಬೆ ಅವರು ಮೊಯಿತ್ರಾ ವಿರುದ್ಧ ಪ್ರಶ್ನೆಗಾಗಿ ಹಣ ಪಡೆದ ಆರೋಪ ಮಾಡಿದ್ದರು. ನಂತರ ಮೊಯಿತ್ರಾ ವಿರುದ್ಧ ಲೋಕಪಾಲ್ ನಿರ್ದೇಶನದ ಮೇರೆಗೆ ಎಫ್ಐಆರ್ ದಾಖಲಿಸಲಾಗಿತ್ತು. ಪ್ರಶ್ನೆಗಾಗಿ ಹಣ ಪಡೆದ ಆರೋಪದ ಮೇಲೆ ದಾಖಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹುವಾ ಅವರಿಗೆ ಸಂಬಂಧಿಸಿದ ಕೋಲ್ಕತ್ತಾದ ಹಲವು ಸ್ಥಳಗಳಲ್ಲಿ ಕೇಂದ್ರೀಯ ತನಿಖಾ ದಳ (CBI) ಶೋಧ ಕಾರ್ಯ ನಡೆಸಿ ಎಫ್ಐಆರ್ ಸಹ ದಾಖಲಿಸಲಾಗಿತ್ತು.
ಕೈಗಾರಿಕೋದ್ಯಮಿ ಗೌತಮ್ ಅದಾನಿ ಮತ್ತು ಪ್ರಧಾನಿ ನರೇಂದ್ರ ಮೋದಿಯವರ ಮೇಲೆ ಪ್ರಶ್ನೆಗಳ ದಾಳಿ ಮಾಡಲು ದುಬೈ ಮೂಲದ ಉದ್ಯಮಿ ದರ್ಶನ್ ಹಿರಾನಂದನಿ ಅವರಿಂದ ನಗದು ಮತ್ತು ಉಡುಗೊರೆಗಳನ್ನು ಪಡೆದು ಟಿಎಂಸಿ ನಾಯಕಿ ಲೋಕಸಭೆಯಲ್ಲಿ ಪ್ರಶ್ನೆಗಳನ್ನು ಕೇಳಿದ್ದಾರೆ ಎಂದು ನಿಶಿಕಾಂತ್ ದುಬೆ ಆರೋಪಿಸಿದ್ದರು. ಈ ಆರೋಪಗಳನ್ನು ಮೊಯಿತ್ರಾ ಅವರು ನಿರಾಕರಿಸಿದ್ದರು.
ನಂತರ ಲೋಕಪಾಲ್ ಸಿಬಿಐನಿಂದ ಆರು ತಿಂಗಳೊಳಗೆ ತನಿಖಾ ವರದಿ ಕೇಳಿತ್ತು. ತನಿಖೆಯ ಸ್ಥಿತಿಗತಿ ಕುರಿತು ಮಾಸಿಕ ವರದಿ ಸಲ್ಲಿಸುವಂತೆ ಸಿಬಿಐಗೆ ಸೂಚಿಸಲಾಗಿತ್ತು. ಮಹುವಾ ಮೊಯಿತ್ರಾ ಅವರನ್ನು ಕಳೆದ ವರ್ಷ ಲೋಕಸಭೆಯಿಂದ ಉಚ್ಛಾಟನೆ ಮಾಡಲಾಗಿತ್ತು. ಉಚ್ಚಾಟನೆಯನ್ನು ಪ್ರಶ್ನಿಸಿ ಮಹುವಾ ಮೊಯಿತ್ರಾ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ. ಈ ನಡುವೆಯೇ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಈ ಹಿಂದೆ ಗೆದ್ದಿದ್ದ ಕೃಷ್ಣನಗರ ಕ್ಷೇತ್ರದಿಂದ ಟಿಎಂಸಿಯಿಂದ ಅವರನ್ನು ಕಣಕ್ಕಿಳಿಸಲಾಗಿದೆ.