ಪ್ರಸ್ತುತ ನಡೆಯುತ್ತಿರುವ 2024ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸೋಲು ಮುಂದುವರಿದಿದೆ. ಮಂಗಳವಾರ ಇಲ್ಲಿನ ಎಂ ಚಿನ್ನಸ್ವಾಮಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದಿದ್ದ ಪಂದ್ಯದಲ್ಲಿ ಲಖನೌ ಸೂಪರ್ ಜಯಂಟ್ಸ್ ವಿರುದ್ಧ ಆರ್ಸಿಬಿ 28 ರನ್ಗಳಿಂದ ಸೋಲಿನ ಆಘಾತ ಅನುಭವಿಸಿತು
ಲಖನೌ ಎದುರು ಆರ್ಸಿಬಿಯ ಸೋಲಿಗೆ 5 ಪ್ರಮುಖ ಕಾರಣಗಳು
1. ಫೀಲ್ಡಿಂಗ್ ವೈಫಲ್ಯ
ಲಖನೌ ಸೂಪರ್ ಜಯಂಟ್ಸ್ ಎದುರಿನ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕಳಪೆ ಫೀಲ್ಡಿಂಗ್ ಮಾಡಿತು. ಕೆಲ ಆಟಗಾರರು ಮಿಸ್ ಫೀಲ್ಡ್ ಮಾಡಿದ್ದರು. ಇದಕ್ಕಿಂತ ಮುಖ್ಯವಾಗಿ ಲಖನೌ ಪರ ಬ್ಯಾಟಿಂಗ್ನಲ್ಲಿ ಮಿಂಚಿದ್ದ ಕ್ವಿಂಟನ್ ಡಿ ಕಾಕ್ ಹಾಗೂ ನಿಕೋಲಸ್ ಪೂರನ್ ಅವರ ಕ್ಯಾಚ್ಗಳನ್ನು ಆರ್ಸಿಬಿ ಆಟಗಾರರು ಕೈ ಚೆಲ್ಲಿದ್ದರು. ಕ್ವಿಂಟನ 30 ರನ್ ಆಸುಪಾಸಿನಲ್ಲಿ ಸಿರಾಜ್ ಬೌಲಿಂಗ್ನಲ್ಲಿ ಎಡ್ಜ್ ಮಾಡಿದ್ದರು. ಆದರೆ, ಫೀಲ್ಡರ್ ಇಲ್ಲದ ಕಾರಣ ಅವರು ಬಚಾವ್ ಆಗಿದ್ದರು.
2. ಮೊಹಮ್ಮದ್ ಸಿರಾಜ್ ಬೌಲಿಂಗ್ ವೈಫಲ್ಯ
ಕಳೆದ ಹಲವು ವರ್ಷಗಳಿಂದ ಆರ್ಸಿಬಿ ತಂಡಕ್ಕೆ ಮೊಹಮ್ಮದ್ ಸಿರಾಜ್ ಕೀ ಬೌಲರ್ ಆಗಿದ್ದಾರೆ. ಹೊಸ ಚೆಂಡಿನಲ್ಲಿ ಬೌಲ್ ಮಾಡುವ ಇವರು ಪವರ್ಪ್ಲೇನಲ್ಲಿ ವಿಕೆಟ್ಗಳನ್ನು ಕಬಳಿಸುತ್ತಿದ್ದರು. ಆದರೆ, ಪ್ರಸಕ್ತ ಆವೃತ್ತಿಯಲ್ಲಿ ಇವರು ವಿಫಲರಾಗುತ್ತಿದ್ದಾರೆ
3. ಫಾಫ್ ಡು ಪ್ಲೆಸಿಸ್ ರನ್ಔಟ್
182 ರನ್ಗಳ ಗುರಿ ಹಿಂಬಾಲಿಸಿದ ಆರ್ಸಿಬಿ ತಂಡ 4.1 ಓವರ್ಗಳಿಗೆ ವಿಕೆಟ್ ಇಲ್ಲದೆ 40 ರನ್ ಗಳಿಸಿ ಉತ್ತಮ ಆರಂಭ ಪಡೆದಿತ್ತು. ಆದರೆ, 22 ರನ್ ಗಳಿಸಿ ವಿರಾಟ್ ಕೊಹ್ಲಿ ವಿಕೆಟ್ ಒಪ್ಪಿಸಿದರು. ಇದಾದ ಬಳಿಕ 19 ರನ್ ಗಳಿಸಿ ಆರ್ಸಿಬಿ ನಾಯಕ ಫಾಫ್ ಡು ಪ್ಲೆಸಿಸ್ ಉತ್ತಮ ಲಯದಲ್ಲಿ ಕಾಣುತ್ತಿದ್ದರು. ಆದರೆ, 6ನೇ ಓವರ್ ಮೊದಲನೇ ಎಸೆತದಲ್ಲಿ ಮಯಾಂಕ್ ಯಾದವ್ಗೆ ರನ್ ಕದಿಯಲು ಪ್ರಯತ್ನಿಸಿದ ಪಾಫ್ ಡು ಪ್ಲೆಸಿಸ್ ರನ್ಔಟ್ ಆದರು
4. ಮಧ್ಯಮ ಕ್ರಮಾಂಕದ ಬ್ಯಾಟರ್ಗಳ ವೈಫಲ್ಯ
ಆರ್ಸಿಬಿ ತಂಡದ ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್ಗಳ ವೈಫಲ್ಯ ಮುಂದುವರಿಯುತ್ತಿದೆ. ಸ್ಟಾರ್ ಬ್ಯಾಟರ್ ಗ್ಲೆನ್ ಮ್ಯಾಕ್ಸ್ವೆಲ್, ಮಯಾಂಕ್ ಯಾದವ್ ಅವರ ಎಸೆತದಲ್ಲಿ ಆಡಿದ ತಮ್ಮ ಎರಡನೇ ಎಸೆತದಲ್ಲಿಯೇ ಕ್ಯಾಚ್ ಕೊಟ್ಟು ಡಕ್ಔಟ್ ಆದರು
5. ಮಯಾಂಕ್ ಯಾದವ್ ಬೌಲಿಂಗ್ ಹೊಸತು
ಗಂಟೆಗೆ ಸರಾಸರಿ 150 ಕಿ.ಮೀಗೂ ಹೆಚ್ಚಿನ ವೇಗದಲ್ಲಿ ಬೌಲ್ ಮಾಡುತ್ತಿರುವ ಲಖನೌ ಸೂಪರ್ ಜಯಂಟ್ಸ್ ತಂಡದ ಮಯಾಂಕ್ ಯಾದವ್ಗೆ ಇದೇ ಮೊದಲ ಬಾರಿ ಆರ್ಸಿಬಿ ಬ್ಯಾಟ್ಸ್ಮನ್ಗಳು ಎದುರಿಸಿದರು. ಹಾಗಾಗಿ ಇವರ ಬೌಲಿಂಗ್ ಅನ್ನು ಸಮರ್ಥವಾಗಿ ಮೆಟ್ಟಿ ನಿಲ್ಲುವಲ್ಲಿ ಆರ್ಸಿಬಿಯ ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್ಗಳು ವಿಫಲರಾದರು.