ಕೇರಳ: ಲೋಕಸಭಾ ಚುನಾವಣೆಗೆ ಕೇರಳದ ವಯನಾಡಿನ ಕಾಂಗ್ರೆಸ್ ಸಂಸದ ಹಾಗೂ ಕಾಂಗ್ರೆಸ್ ನ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಇಂದು ವಯನಾಡಿನಲ್ಲಿ ನಾಮಪತ್ರ ಸಲ್ಲಿಸಲಿದ್ದಾರೆ. ನಾಮಪತ್ರ ಸಲ್ಲಿಸುವ ಮುನ್ನ ರಾಹುಲ್ ಗಾಂಧಿ ಸಹೋದರಿ ಪ್ರಿಯಾಂಕಾ ಗಾಂಧಿ ಅವರೊಂದಿಗೆ ರೋಡ್ ಶೋ ನಡೆಸಿದರು ಮತ್ತು ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ರಾಹುಲ್ ಗಾಂಧಿ ಅವರ ರೋಡ್ ಶೋನಲ್ಲಿ ಭಾರಿ ಜನಸ್ತೋಮ ಕಂಡುಬಂತು.
ಹೊರಬಿದ್ದ ಚಿತ್ರಗಳಲ್ಲಿ ರಾಹುಲ್ ಗಾಂಧಿ ಅವರ ಬೆಂಗಾವಲು ಪಡೆ ಜನರಿಂದ ಸುತ್ತುವರಿದಿರುವುದು ಕಂಡುಬಂದಿತ್ತು. ವಯನಾಡಿನ ಹಾಲಿ ಸಂಸದ ರಾಹುಲ್ ಗಾಂಧಿ ವಿರುದ್ಧ ಭಾರತೀಯ ಜನತಾ ಪಕ್ಷ ಕೇರಳ ಬಿಜೆಪಿ ರಾಜ್ಯಾಧ್ಯಕ್ಷ ಕೆ ಸುರೇಂದ್ರನ್ ಅವರನ್ನು ಕಣಕ್ಕಿಳಿಸಿದೆ. ಲೆಫ್ಟ್ ಡೆಮಾಕ್ರಟಿಕ್ ಫ್ರಂಟ್ (ಎಲ್ಡಿಎಫ್) ವಯನಾಡ್ನಿಂದ ಭಾರತೀಯ ಕಮ್ಯುನಿಸ್ಟ್ ಪಕ್ಷದ ಹಿರಿಯ ನಾಯಕಿ ಅನ್ನಿ ರಾಜಾ ಅವರನ್ನು ಕಣಕ್ಕಿಳಿಸಿದೆ. 2019ರ ಲೋಕಸಭೆ ಚುನಾವಣೆಯಲ್ಲಿ ರಾಹುಲ್ ಗಾಂಧಿ ವಯನಾಡ್ ನಿಂದ ಗೆದ್ದಿದ್ದಾರೆ.