ತನ್ನ ಸೌಂದರ್ಯ ಹಾಗೂ ಅದ್ಭುತ ನಟನೆಯ ಮೂಲಕ ಕೋಟ್ಯಾಂತರ ಅಭಿಮಾನಿಗಳ ಮನ ಗೆದ್ದಿರುವ ನಟಿ ಶ್ರೀದೇವಿ ರಿಯಲ್ ಲೈಫ್ ಬಗ್ಗೆ ತಿಳಿದುಕೊಳ್ಳಬೇಕು ಎಂಬ ಕ್ಯೂರಿಯಾಸಿಟಿ ಸಾಕಷ್ಟು ಮಂದಿಗೆ ಇದೆ. ಅಂತೆಯೇ ಬಾಲಿವುಡ್ ನಲ್ಲಿ ಅನೇಕ ಮಂದಿ ಶ್ರೀದೇವಿ ಬಯೋಪಿಕ್ ಮಾಡಬೇಕು ಎಂದುಕೊಂಡಿದ್ದಾರೆ. ಆದರೆ ನಾನು ಬದುಕಿರುವವರೆಗೂ ಶ್ರೀದೇವಿ ಬಯೋಪಿಕ್ ಗೆ ಇಪ್ಪಿಗೆ ನೀಡಲ್ಲ ಎಂದು ನಿರ್ಮಾಪಕ ಹಾಗೂ ಶ್ರೀದೇವಿ ಪತಿ ಬೋನಿ ಕಪೂರ್ ಹೇಳಿದ್ದಾರೆ.
ಬೋನಿ ಕಪೂರ್ ನಿರ್ಮಾಣದ ‘ಮೈದಾನ್’ ಸಿನಿಮಾದ ಪ್ರಚಾರದಲ್ಲಿ ಅವರು ನಿರತರಾಗಿದ್ದಾರೆ. ಚಿತ್ರದ ಪ್ರಚಾರಕ್ಕಾಗಿ ನೀಡಿದ ವಿವಿಧ ಸಂದರ್ಶನಗಳಲ್ಲಿ ಶ್ರೀದೇವಿಯನ್ನು ಪ್ರಸ್ತಾಪಿಸಿದಾಗ ಅವರು ಭಾವುಕರಾಗುತ್ತಿದ್ದಾರೆ. ಸಂದರ್ಶನವೊಂದರಲ್ಲಿ ಅವರಿಗೆ ಶ್ರೀದೇವಿ ಅವರ ಬಯೋಪಿಕ್ ಕುರಿತ ಪ್ರಶ್ನೆ ಮಾಡಲಾಗಿದೆ. ಇದಕ್ಕೆ ಅವರು ಉತ್ತರಿಸಿದ್ದಾರೆ.
ಶ್ರೀದೇವಿಯನ್ನು ಮದುವೆಯಾಗುವ ಮೊದಲು ಬೋನಿ ಕಪೂರ್ ಅವರಿಗೆ ಆಗಲೇ ಮದುವೆ ಆಗಿತ್ತು. ಮೋನಾ ಜೊತೆ ಅವರು ಸಂಸಾರ ನಡೆಸುತ್ತಿದ್ದರು. ಆದಾಗ್ಯೂ ಶ್ರೀದೇವಿ ಜೊತೆ ಅವರಿಗೆ ಪ್ರೀತಿ ಮೂಡಿತು. 1996ರಲ್ಲಿ ಇವರು ಮದುವೆ ಆದರು. ಅವರಿಗೆ ಜಾನ್ವಿ ಮತ್ತು ಖುಷಿ ಹೆಸರಿನ ಹೆಣ್ಣು ಮಕ್ಕಳಿದ್ದಾರೆ. 2018ರಲ್ಲಿ ಶ್ರೀದೇವಿ ದುಬೈನ ಹೋಟೆಲ್ ಬಾತ್ ಟಬ್ನಲ್ಲಿ ಮುಳುಗಿ ಸಾವನ್ನಪ್ಪಿದ್ದರು. ಅವರ ಸಾವಿನ ಬಗ್ಗೆ ಇನ್ನೂ ಅನೇಕರಿಗೆ ಅನುಮಾನ ಇದೆ. ಹೀಗಾಗಿ, ಬಯೋಪಿಕ್ ಮಾಡಿದರೆ ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಸಿಗಲಿದೆ ಅನ್ನೋದು ಅನೇಕರ ಅಭಿಪ್ರಾಯ ಆಗಿತ್ತು. ಆದರೆ, ಇದಕ್ಕೆ ಬೋನಿ ಕಪೂರ್ ಅವಕಾಶ ನೀಡುವುದಿಲ್ಲ ಎಂದಿದ್ದಾರೆ.
‘ಶ್ರೀದೇವಿ ಅವರ ಜೀವನಾಧಾರಿತ ಬಯೋಪಿಕ್ ಮಾಡಲು ನೀವು ಎಂದಾದರೂ ಯೋಚಿಸಿದ್ದೀರಾ’ ಎಂದು ಅವರಿಗೆ ಕೇಳಲಾಯಿತು. ಇದಕ್ಕೆ ಉತ್ತರಿಸಿದ ಬೋನಿ ಕಪೂರ್, ‘ಶ್ರೀದೇವಿ ತಮ್ಮ ಖಾಸಗಿ ಜೀವನವನ್ನು ಖಾಸಗಿಯಾಗಿ ಇಟ್ಟುಕೊಳ್ಳಲು ಇಷ್ಟಪಡುತ್ತಿದ್ದರು. ಆದ್ದರಿಂದ ಅವರ ಮರಣದ ನಂತರವೂ ಇದನ್ನು ಅನುಸರಿಸಬೇಕಿದೆ. ಅವರ ಜೀವನದ ಮೇಲೆ ಬಯೋಪಿಕ್ ಬರುವುದಿಲ್ಲ. ನಾನು ಬದುಕಿರುವವರೆಗೂ ಬಯೋಪಿಕ್ಗೆ ಒಪ್ಪಿಗೆ ನೀಡುವುದಿಲ್ಲ’ ಎಂದಿದ್ದಾರೆ. ಕುಟುಂಬದವರ ಒಪ್ಪಿಗೆ ಪಡೆಯದೇ ಬಯೋಪಿಕ್ ಮಾಡೋದು ಅಸಾಧ್ಯ. ಹೀಗಾಗಿ, ಶ್ರೀದೇವಿ ಬಯೋಪಿಕ್ ದೊಡ್ಡ ಪರದೆಮೇಲೆ ಬರೋದು ಅನುಮಾನವೇ ಆಗಿದೆ.